ನಕ್ಸಲೀಯರ ವಶದಲ್ಲಿದ್ದ ಕಡಸೋಲ್ ಅರಣ್ಯ ಭಾಗವನ್ನು ತಮ್ಮ ವಶ ಮಾಡಿಕೊಂಡ ಬೆನ್ನಲ್ಲೇ ಭದ್ರತಾ ಪಡೆಗಳು ಶನಿವಾರ ರಾಮಗಡವನ್ನು ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಲಾಲ್‌ಗಡದತ್ತ ಮುಂದುವರಿದಿದೆ.
ರಾಮಗಡವನ್ನು ನಮ್ಮ ಹಿಡಿತಕ್ಕೆ ಪಡೆದಿದ್ದೇವೆ, ಇಲ್ಲಿ ಪೊಲೀಸ್ ಹೊರಠಾಣೆ ಮತ್ತು ಶಿಬಿರವನ್ನು ಸದ್ಯದಲ್ಲೇ ಆರಂಭಿಸುತ್ತೇವೆ ಎಂದು ತಿಳಿಸಿದ ಡಿಐಜಿ ಸಿದ್ದನಾಥ್ ಗುಪ್ತಾ, ಕಾರ್ಯಾಚರಣೆ ಮುಂದುವರಿಯಲಿದ್ದು ಈ ಪ್ರದೇಶದಲ್ಲಿ ಸಾಮಾನ್ಯ ಸ್ಥಿತಿ ಮರುಸ್ಥಾಪಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರತಾ ಪಡೆಗಳು ಕಡಸೋಲ್‌ನಿಂದ ಮುನ್ನುಗ್ಗಿ ಬೆಳಿಗ್ಗೆ 8ಕ್ಕೆ ಕಾರ್ಯಾಚರಣೆ ಆರಂಭಿಸಿದವು. ಆರಂಭದಲ್ಲಿ ಸ್ವಲ್ಪ ಕಾಲ ನಕ್ಸಲೀಯರು ಗುಂಡು ಹಾರಿಸಿ ಮತ್ತು ನೆಲಬಾಂಬ್ ಸ್ಫೋಟಿಸಿ ಪ್ರತಿರೋಧ ತೋರಿದರಾದರೂ ನಂತರ ಹಿಮ್ಮೆಟ್ಟಿದರು ಎಂದು ಅವರು ವಿವರಿಸಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ ರಾಮಗಡವನ್ನು ಪ್ರವೇಶಿಸುತ್ತಿದ್ದಂತೆ ಅವರನ್ನು ಗ್ರಾಮಸ್ಥರು ಸಡಗರದಿಂದ ಸ್ವಾಗತಿಸಿದರು.
ಕಳೆದ8 ತಿಂಗಳಿನಿಂದ ಈ ಭಾಗ ನಕ್ಸಲರ ವಶದಲ್ಲಿದ್ದ ಪರಿಣಾಮವಾಗಿ ತಾವು ಅನುಭವಿಸಬೇಕಾಗಿ ಬಂದ ಬವಣೆಗಳನ್ನು ಹೇಳಿಕೊಂಡರು ಎನ್ನಲಾಗಿದೆ. ನಕ್ಸಲರು ಸುಲಿಗೆ ಮಾಡುತ್ತಿದ್ದರು. ಅವರಿಗೆ ಆಹಾರ ಧಾನ್ಯಗಳನ್ನು ಪೂರೈಸಬೇಕಾಗಿತ್ತು. ಮದುವೆ ಏರ್ಪಡಿಸುವ ಮುನ್ನ ನಕ್ಸಲೀಯರ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು, ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಅಗೆದು ಹಾಕಿದ್ದರಿಂದ ಸಂಚಾರ ಅಸಾಧ್ಯವಾಗಿತ್ತು ಎಂದು ಗ್ರಾಮದ ಜನ ವಿವರಿಸಿದ್ದಾರೆ. |