ಮುಂಬೈ ಉಗ್ರರ ದಾಳಿ ಪ್ರಕರಣಗಳಂತಹ ವರದಿಗಳನ್ನು ವಾರ್ತಾ ಮತ್ತು ಪ್ರಚಾರ ಇಲಾಖೆ ನಿಯಂತ್ರಿಸಲಿದೆ ಮತ್ತು ಇಂತಹ ಪ್ರಕರಣಗಳಲ್ಲಿ 'ವಿಶ್ವಾಸಾರ್ಹ ಸುದ್ದಿ'ಗಳನ್ನು ಬಿತ್ತರಿಸಲು ಸಮನ್ವಯ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.
'ಎಲ್ಲರೂ ಟಿವಿ ಚಾನೆಲ್‌ಗಳನ್ನು ನೋಡುತ್ತಾರೆ. ಸ್ವಲ್ಪವೇ ಮುಂಜಾಗ್ರತೆ ವಹಿಸಿದರೂ ದೇಶದ ಹಿತಾಸಕ್ತಿಗೆ ಧಕ್ಕೆ ತರುವ ದೃಶ್ಯಗಳನ್ನು ಪ್ರಸಾರವಾಗದಂತೆ ತಡೆಯಬಹುದು. ಮುಂಬೈ ದಾಳಿ ವೇಳೆಯಲ್ಲಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲ ಅಂಶಗಳು ದಾಳಿಕೋರರಿಗೆ ನೆರವು ನೀಡಿದೆ ಎಂದು ನಮಗೆ ಅನ್ನಿಸಿದೆ ಎಂದು ಸೋನಿ ಎನ್‌ಡಿಟಿವಿಗೆ ತಿಳಿಸಿದರು.
ನೀವೆಲ್ಲಾ ಸರಿಯಾದ ಕರ್ತವ್ಯವನ್ನೇ ನಿರ್ವಹಿಸುತ್ತಿದ್ದೀರಿ. ಆದರೆ ದೇಶದ ಹಿತಾಸಕ್ತಿಗೆ ಧಕ್ಕೆ ತರುವ ದೃಶ್ಯಗಳನ್ನು ಪ್ರಸಾರವಾಗದಂತೆ ತಡೆಯಬೇಕು. ಇಂತಹ ಚಿಕ್ಕ ವಿಷಯವನ್ನು ಪ್ರಸಾರ ಮಾಡುವಾಗಲೂ ತುಂಬಾ ಜಾಗರೂಕರಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಲದೇ ಮುಂಬೈ ದಾಳಿಯಂತಹ ಘಟನೆಯನ್ನು ಪ್ರಸಾರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅಸೋಸಿಯೇಷನ್(ಎನ್‌ಬಿಎ) ಮಾತುಕತೆ ನಡೆಸಿದ್ದು, ಮಾಧ್ಯಮಗಳು ಸ್ವತಃ ಲಕ್ಷ್ಮಣರೇಖೆಯನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿರುವುದಾಗಿಯೂ ಹೇಳಿದರು. ಇದು ನಿಜಕ್ಕೂ ಉತ್ತಮವಾದ ನಿಲುವು, ಅಂತಹ ಸ್ವಯಂ ನಿರ್ಧಾರಕ್ಕೆ ಕೇಂದ್ರ ಕೂಡ ಬೆಂಬಲ ನೀಡುವುದಾಗಿ ಸೋನಿ ವಿವರಿಸಿದರು. |