ದೇಶಾದ್ಯಂತ ಈ ಬಾರಿ ಮುಂಗಾರು ಮಳೆ ಕೈಕೊಟ್ಟು ಕಂಗಾಲಾಗಿರುವ ರೈತರಿಗೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಸಮಾಧಾನ ಹೇಳಿದ್ದು, ದೇಶದಲ್ಲಿ ಬರ ಪರಿಸ್ಥಿತಿ ತಲೆದೋರಿಲ್ಲ ಎಂದು ಸ್ಪಷ್ಟಪಡಿಸಿದ್ದು, ಬೆಲೆ ಏರಿಕೆಯ ವಿಚಾರವನ್ನೂ ತಳ್ಳಿಹಾಕಿದ್ದಾರೆ.
ಮುಂಗಾರು ವೈಫಲ್ಯದಿಂದ ಉಂಟಾಗಿರುವ ನಷ್ಟವನ್ನು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಬೀಳುವ ಮಳೆಯಿಂದ ಭರಿಸಿಕೊಳ್ಳಬಹುದು ಎಂಬುದು ಶರದ್ ಪವಾರ್ ಅವರ ಲೆಕ್ಕಚಾರ. ಕೃಷಿ ಸಚಿವರು ಮುಂದೆ ಬೀಳಬಹುದಾದ ಮಳೆಯನ್ನು ನಂಬಿಕೊಂಡಿದ್ದಾರೆಯೇ?ಅವರ ಹೇಳಿಕೆಯ ಪ್ರಕಾರ, ದೇಶದಲ್ಲಿ ಆಹಾರ ದಾಸ್ತಾನು ಹಿಂದಿನ ವರ್ಷದಕ್ಕಿಂತ ಉತ್ತಮವಾಗಿದೆ. ಆಹಾರ ಬೆಲೆಗಳನ್ನು ಖಂಡಿತ ಏರಿಸುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಮಣಿಪುರ ರಾಜ್ಯ ಈಗಾಗಲೇ ಬರಪೀಡಿತ ಎಂದು ಘೋಷಿಸಿಕೊಂಡಾಗಿರುವ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರ ಭರವಸೆಯು ಕುತೂಹಲ ಮೂಡಿಸಿದೆ. ಕೇರಳ, ಕರ್ನಾಟಕದ ಕಡೆಗಳಿಂದ ಎಗರಿ ಹೋದ ಮುಂಗಾರು ಮಳೆ ಮೋಡಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಒರಿಸ್ಸಾಗಳತ್ತ ಮುನ್ನುಗ್ಗುತ್ತಿರುವುದು ಪವಾರ್ ಹೇಳಿಕೆಯನ್ನು ಪುಷ್ಟೀಕರಿಸುವಂತೆ ತೋರುತ್ತಿದೆ.
ವಿಪರೀತ ಬಿಸಿಲಿನಿಂದ ಕಂಗೆಟ್ಟು ಹೋಗಿರುವ ಉತ್ತರ ಪ್ರದೇಶ, ರಾಜಸ್ಥಾನ ಮತ್ತಿತರ ವಾಯುವ್ಯ ಭಾಗದ ಪ್ರದೇಶಗಳಲ್ಲಿ ಮಳೆ ಬಿದ್ದು ತಂಪೆರಚುವ ಕಾಲ ಬಂದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಕೂಡ ಭರವಸೆಗೆ ಪುಷ್ಟಿ ನೀಡಿದೆ. |