ರಾಜ್ಯದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಮುಖ್ಯಮಂತ್ರಿಗಳ ಪ್ರತಿಮೆಗಳ ನಿರ್ಮಾಣಕ್ಕೆ ದುರ್ಬಳಕೆ ಮಾಡಿಕೊಂಡ ಮಾಯಾವತಿ ನೇತೃತ್ವದ ಉತ್ತರಪ್ರದೇಶದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶೋಕಾಸ್ ನೋಟಿಸ್ ನೀಡಿದೆ. ನೋಟಿಸಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಅದು ಸರ್ಕಾರಕ್ಕೆ ತಿಳಿಸಿದ್ದು, ಮುಖ್ಯಮಂತ್ರಿ ಮಾಯಾವತಿ ಅವರಿಗೆ ಕೂಡ ನೋಟಿಸ್ ನೀಡಿದೆ.
ಸ್ವಂತ ಪ್ರತಿಮೆಗಳ ನಿರ್ಮಾಣಕ್ಕೆ 1000 ಕೋಟಿ ರೂ. ಖರ್ಚು ಮಾಡಿದ ಮಾಯಾವತಿ ಅವರನ್ನು ಕೇಂದ್ರ ಗೃಹಸಚಿವ ಚಿದಂಬರಂ ಕೂಡ ಭಾನುವಾರ ರಾತ್ರಿ ತರಾಟೆಗೆ ತೆಗೆದುಕೊಂಡಿದ್ದರು. ಈ ಮೊತ್ತವನ್ನು ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಬಡತನ ನಿವಾರಣೆಗೆ ಬಳಸಬಹುದಿತ್ತು ಎಂದು ಹೇಳಿದ್ದಾರೆ.
ಶಿವಗಂಗಾದಲ್ಲಿ ತಮ್ಮ ಕ್ಷೇತ್ರದ ಮತದಾರರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ರಾಜಕೀಯದಲ್ಲಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲವೆಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುತ್ತದೆಂಬ ಶಂಕೆಯ ಮೇಲೆ ನಿಗದಿಗಿಂತ ಮುಂಚೆಯೇ ದಲಿತ ನಾಯಕರ ಪ್ರತಿಮೆಗಳು ಮತ್ತು ಉದ್ಯಾನಗಳ ಉದ್ಘಾಟನೆ ಮಾಡಿದ್ದಕ್ಕಾಗಿ ಮಾಯಾವತಿ ಪ್ರತಿಪಕ್ಷಗಳ ಟೀಕಾಪ್ರವಾಹಕ್ಕೆ ಗುರಿಯಾದರು. |