ಸಲಿಂಗರತಿಯನ್ನು ಅಪರಾಧವೆಂದು ಹೇಳುವ ವಿವಾದಾತ್ಮಕ ಕಾನೂನನ್ನು ರದ್ದುಮಾಡಲು ಕೇಂದ್ರಸರ್ಕಾರ ಮುಂದಾಗಿರುವುದರ ನಡುವೆ, ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಶಾಲೆ ಖ್ಯಾತೆ ತೆಗೆದಿದೆ. ಅಸಹಜ ಲೈಂಗಿಕತೆ ಇಸ್ಲಾಂ ಧರ್ಮದ ಸಿದ್ಧಾಂತಗಳಿಗೆ ವಿರೋಧಿಯೆಂದು ಅದು ಟೀಕಿಸಿದೆ. ಶರಿಯತ್ ಕಾನೂನಿನ ಅಡಿಯಲ್ಲಿ ಸಲಿಂಗರತಿ ಅಪರಾಧವಾಗಿದ್ದು, ಇಸ್ಲಾಂನಲ್ಲಿ ನಿಷೇಧಿಸಲಾಗಿದೆ ಎಂದು ದಾರುಲ್ ಉಲೂಂ ದಿಯೊಬಂದ್‌ನ ಉಪ ಕುಲಪತಿ ಮೌಲಾನಾ ಅಬ್ದುಲ್ ಮದ್ರಾಸಿ ತಿಳಿಸಿದ್ದಾರೆ.
ಸಲಿಂಗರತಿ ಅಪರಾಧವೆಂದು ಪರಿಗಣಿಸುವ ಐಪಿಸಿಯ ಸೆಕ್ಷನ್ 377ನ್ನು ರದ್ದುಮಾಡಬಾರದೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು. ಚರ್ಚ್ ಮುಂತಾದ ಧಾರ್ಮಿಕ ಗುಂಪುಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಅಭಿಪ್ರಾಯಗಳನ್ನು ಪರಿಗಣಿಸಿ 377ನೇ ಸೆಕ್ಷನ್ ರದ್ದುಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ ಬಳಿಕ ಅವರು ಆಕ್ಷೇಪದ ದನಿ ಎತ್ತಿದ್ದಾರೆ.
ಸಲಿಂಗರತಿ ಚಟುವಟಿಕೆಗಳು ಅಪರಾಧವೆಂದು ಹೇಳಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಮೌಲಾನಾ ಸಲೀಂ ಕಸ್ಮಿ, ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಸಲಿಂಗರತಿ ಶಿಕ್ಷಾರ್ಹವಾಗಿದ್ದು, 377 ಸೆಕ್ಷನ್ ತಿದ್ದಬಾರದೆಂದು ತಿಳಿಸಿದ್ದಾರೆ.ಸಲಿಂಗ ರತಿಯನ್ನು ಕಾನೂನುಬದ್ಧಗೊಳಿಸುವುದು ಸಮಾಜಕ್ಕೆ ಹಾನಿಕರ ಎಂದೂ ಕಸ್ಮಿ ಹೇಳಿದರು. ಐಪಿಸಿಯ ವಿವಾದಾತ್ಮಕ ಸೆಕ್ಷನ್ ರದ್ದುಮಾಡುವ ಕೇಂದ್ರಸರ್ಕಾರದ ಸುದ್ದಿಗಳಿಂದ ಉತ್ತೇಜಿತರಾದ ಸಲಿಂಗಿಗಳ ಸಮುದಾಯದ ಸದಸ್ಯರು ಅನೇಕ ನಗರಗಳಲ್ಲಿ ಪೆರೇಡ್ ನಡೆಸಿದ್ದಾರೆ. |