ಕಾವೇರಿ ನದಿ ನೀರು ಬಳಕೆಯ ಹಿನ್ನೆಲೆಯಲ್ಲಿ ಕರ್ನಾಟಕದಿಂದ ತೀವ್ರ ವಿರೋಧ ಎದುರಿಸುತ್ತಿರುವ 1,334 ಕೋಟಿ ರೂ.ಗಳ ತಮಿಳುನಾಡಿನ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯು ಸುಸೂತ್ರವಾಗಿಯೇ ಇದೆ ಮತ್ತು ಅದು 2012ರವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿರುವುದರೊಂದಿಗೆ ಕನ್ನಡಿಗರ ಆತಂಕದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಕಳೆದ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಿಂದಾಗಿ ಯಾವುದೇ ಗೊಂದಲ ಅಥವಾ ಸಂಭಾವ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಯೋಜನೆಯು ಈಗ ಸುಲಲಿತವಾಗಿ ಸಾಗುತ್ತಿದೆ ಎಂದು ಕರುಣಾನಿಧಿ ಪುತ್ರ ಸ್ಟಾಲಿನ್ ಅವರು ರಾಜ್ಯ ವಿಧಾನಸಭೆಗೆ ಸೋಮವಾರ ತಿಳಿಸಿದ್ದಾರೆ.
ತನ್ನ ಮಿತ್ರಪಕ್ಷವಾಗಿರುವ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಅನುಕೂಲ ದೊರಕಿಸುವ ನಿಟ್ಟಿನಲ್ಲಿ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಅವರು ಯೋಜನೆಯನ್ನು ಉದ್ದೇಶಪೂರ್ವಕವಾಗಿ ತಡೆದಿದ್ದರು ಎಂದು ಪ್ರತಿಪಕ್ಷಗಳು ಕೂಗಾಡಿದ್ದವು.
ಕರ್ನಾಟಕ-ತಮಿಳುನಾಡು ಗಡಿಯ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಸುವ, ಜಪಾನ್ ಸಹಯೋಗದ ಈ ಯೋಜನೆಯಿಂದ ಕಾವೇರಿ ನದಿ ನೀರಿನ ಪಾಲಿನ ಮೇಲೆ ಇದು ಪ್ರಭಾವ ಬೀರುತ್ತದೆ ಎಂಬ ಕಾರಣಕ್ಕೆ ಕರ್ನಾಟಕವೂ ತೀವ್ರವಾಗಿಯೇ ಪ್ರತಿರೋಧ ಒಡ್ಡುತ್ತಿದೆ.
ಮೊದಲ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, 3-4 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳಿದ ಸ್ಟಾಲಿನ್, ಕಾವೇರಿ ನೀರು ಬಳಸಿ 1400 ಕೋಟಿ ರೂ.ಗಳಲ್ಲಿ ವೆಲ್ಲೋರ್‌ಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು. |