ಇಸ್ಲಾಂನ ದಾರುಲ್ ಉಲೂಂ ದಿಯೊಬಂದ್ ಸಲಿಂಗಕಾಮ ಸಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಭಾರತೀಯ ದಂಡ ಸಂಹಿತೆ ಕಾಯ್ದೆಯ 377ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಸಲಿಂಗಕಾಮವನ್ನು ಸಕ್ರಮಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಇದೀಗ ಉಲ್ಟಾ ಹೊಡೆದಿದ್ದಾರೆ.
'ತಾವು ಹಾಗೆ ಹೇಳಿಯೇ ಇಲ್ಲ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮೊಯ್ಲಿ, ಸಲಿಂಗ ಕಾಮವನ್ನು ಸಕ್ರಮ ಮಾಡುವುದಾಗಿ ನಾನೆಂದೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.
ಐಪಿಸಿಯ 377ನೇ ವಿಧಿಯ ಬಗ್ಗೆ ನಾನಿನ್ನೂ ಪರಿಶೀಲನೆ ನಡೆಸಬೇಕಿದೆಯಷ್ಟೇ. ಸಚಿವ ಸಂಪುಟದ ಒಬ್ಬ ಸಚಿವ ಕಾಯ್ದೆಯನ್ನು ಬದಲಿಸುವ ಅಥವಾ ಬದಲಿಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.
ಈ ಬಗ್ಗೆ ಸಚಿವ ಸಂಪುಟ ಮಾತ್ರವೇ ತೀರ್ಮಾನ ಕೈಗೊಳ್ಳಬಹುದಾಗಿದೆ. ಅಲ್ಲದೆ ಈ ಬಗ್ಗೆ ಅತ್ಯಂತ ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯ ಸಂಗ್ರಹಿಸಿದ ಮೇಲಷ್ಟೇ ಮುಂದುವರಿಯಲಾಗುವುದು ಎಂದು ಮೊಯ್ಲಿ ಹೇಳಿದ್ದಾರೆ.
ಸಲಿಂಗ ಕಾಮವನ್ನು ಸಕ್ರಮಗೊಳಿಸುವ ಕೇಂದ್ರದ ನಿರ್ಧಾರಕ್ಕೆ, ಇದು ಭಾರತದ ಸಂಸ್ಕೃತಿ ಹಾಗೂ ಕೌಟುಂಬಿಕ ವ್ಯವಸ್ಥೆಗೇ ವಿರುದ್ಧವಾಗಿದೆ. ಹಲವು ಕಾಯಿಲೆಗಳಿಗೆ ಕಾರಣವಾಗಲಿದೆ ಎಂದು ವಿಶ್ವಹಿಂದು ಪರಿಷತ್‌ನ ದೆಹಲಿ ಘಟಕದ ವಕ್ತಾರ ವಿನೋದ್ ಬನ್ಸಲ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಶಾಲೆ ದಿಯೋಬಂದ್ ಖ್ಯಾತೆ ತೆಗೆದಿದ್ದು, ಅಸಹಜ ಲೈಂಗಿಕತೆ ಇಸ್ಲಾಂ ಧರ್ಮದ ಸಿದ್ಧಾಂತಗಳಿಗೆ ವಿರೋಧಿಯೆಂದು ಅದು ಟೀಕಿಸಿದೆ. ಶರಿಯತ್ ಕಾನೂನಿನ ಅಡಿಯಲ್ಲಿ ಸಲಿಂಗರತಿ ಅಪರಾಧವಾಗಿದ್ದು, ಇಸ್ಲಾಂನಲ್ಲಿ ನಿಷೇಧಿಸಲಾಗಿದೆ ಎಂದು ದಾರುಲ್ ಉಲೂಂ ದಿಯೊಬಂದ್‌ನ ಉಪ ಕುಲಪತಿ ಮೌಲಾನಾ ಅಬ್ದುಲ್ ಮದ್ರಾಸಿ ತಿಳಿಸಿದ್ದಾರೆ.
'ಸಲಿಂಗ ಕಾಮವನ್ನು ಒಪ್ಪಿಕೊಳ್ಳಲು ಆಗೋದಿಲ್ಲ, ಇದು ಬೈಬಲ್‌ನ ತತ್ವಗಳಿಗೆ ವಿರುದ್ಧವಾಗಿದೆ. ಸಮಾಜಕ್ಕೆ ವಿರುದ್ಧವಾಗಿದೆ' ಎಂದು ಮಾರ್ಥೋಮಾ ಸಿರಿಯನ್ ಚರ್ಚ್‌ನ ರೆವರೆಂಡ್ ಅಬ್ರಗಾಂ ಮಾರ್ ಪಾಲೋಸ್ ತಿಳಿಸಿದ್ದರು. |