ಅನುಕೂಲಕರ ತೀರ್ಪನ್ನು ನೀಡುವಂತೆ ಕೇಂದ್ರ ಸಚಿವರೊಬ್ಬರು ತಮಗೆ ಒತ್ತಡ ಹೇರಿದ್ದಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿಯಾದ ಅವರ ಪುತ್ರನ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಗಳನ್ನು ತೆರೆದ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಆರ್. ರಘುಪತಿ, ಕೇಂದ್ರ ಸಚಿವರೊಬ್ಬರು ಈ ಪ್ರಕರಣದ ಆರೋಪಿಗಳ ಪರವಾಗಿ ತೀರ್ಪು ನೀಡುವಂತೆ ತಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಸಚಿವರ ಹೆಸರನ್ನು ಹೇಳಲು ಅವರು ನಿರಾಕರಿಸಿದರು. ತಮ್ಮ ಪುತ್ರ ಪರೀಕ್ಷೆ ಪಾಸು ಮಾಡುವುದಕ್ಕಾಗಿ ಅಧಿಕಾರಿಯೊಬ್ಬರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಡಾ. ಕೃಷ್ಣಮೂರ್ತಿ ಎಂಬವರಿಗೆ ಈ ಪ್ರಕರಣ ಸಂಬಂಧಿಸಿದ್ದು, ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ವೈದ್ಯ ಮತ್ತು ಪುತ್ರದ್ವಯರಿಗಾಗಿ ಸಿಬಿಐ ಹುಡುಕುತ್ತಿದೆ. ನಿರೀಕ್ಷಣಾ ಜಾಮೀನು ಕೋರಿಕೆಗಳ ಮೇಲಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಘುಪತಿ ಅನುಕೂಲಕರ ತೀರ್ಪುಗಳನ್ನು ನೀಡುವುದಕ್ಕೆ ತಮ್ಮ ಒಲವಿಲ್ಲವೆಂದು ಇಂಗಿತ ನೀಡಿ, ಪ್ರಕರಣದ ಸತ್ಯಾಂಶಗಳಿಂದ ಅರ್ಜಿದಾರರಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವುದಕ್ಕೆ ನಿರುತ್ಸಾಹಗೊಳಿಸಿದೆಯೆಂದು ಹೇಳಿದ್ದಾರೆ. |