ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಬಳಿಕ ಇದೀಗ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಸರದಿ. ಬುರ್ಖಾ ನಿಷೇಧಿಸಬೇಕು ಎಂದು ಠಾಕ್ರೆ ಒತ್ತಾಯಿಸಿದ್ದಾರೆ. ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಸೋಮವಾರ ಪ್ರಕಟವಾದ ಸಂಪಾದಕೀಯದಲ್ಲಿ ಠಾಕ್ರೆ, ಫ್ರೆಂಚ್ ಅಧ್ಯಕ್ಷರನ್ನು ಶ್ಲಾಘಿಸಿದ್ದಾರಲ್ಲದೆ, 'ಇಸ್ಲಾಂನ ಅಪಾಯಗಳ' ಬಗ್ಗೆ ಎಚ್ಚರಿಸಿದ್ದಾರೆ.' ಸರ್ಕೋಜಿ ಒಬ್ಬ ಆದರ್ಶ ಆಡಳಿತಗಾರ. ಫ್ರೆಂಚ್ ಆಡಳಿತಗಾರರು ಎಂದಿಗೂ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಮರನ್ನು ಓಲೈಸಲು ಹೋಗುವುದಿಲ್ಲ' ಎಂದು ಬರೆದಿರುವ ಠಾಕ್ರೆ, 'ನಮ್ಮ ಆಡಳಿತಗಾರರೂ ಬುರ್ಖಾ ನಿಷೇಧಿಸಬೇಕು ಮತ್ತು ಸಮಾನ ನಾಗರಿಕ ಸಂಹಿತೆ ಅನುಷ್ಠಾನಗೊಳಿಸಬೇಕು' ಎಂದು ಒತ್ತಾಯಿಸಿದ್ದಾರೆ.ಸರ್ಕೋಜಿ ಒಬ್ಬ ಬಲಿಷ್ಠ ಮುಖಂಡ. ನಮ್ಮವರಂತೆ ಥಕೇಲಾ-ಪಕೇಲಾ (ಸುಸ್ತಾದ, ಬೇಸರತರಿಸುವ) ನಾಯಕರಲ್ಲ. ನಮ್ಮ ದೇಶವನ್ನು ಮುನ್ನಡೆಸುತ್ತಿರುವ ಅರ್ಧಕ್ಕರ್ಧ ಮುಖಂಡರು ತಮ್ಮ ಅಂತ್ಯಸಂಸ್ಕಾರಕ್ಕಾಗಿ ತಾಣ ಹುಡುಕುವ ಕೆಲಸ ಆರಂಭಿಸುವ ಅಗತ್ಯವಿದೆ ಎಂದು ಠಾಕ್ರೆ ಬರೆದಿದ್ದಾರೆ. |