ದೇಶಾದ್ಯಂತ ಕೋಮುದಳ್ಳುರಿಗೆ ಕಾರಣವಾಗಿದ್ದ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷಗಳ ಕಾಲ ಸುದೀರ್ಘವಾಗಿ ತನಿಖೆ ನಡೆಸಿದ ಲಿಬೆರಾನ್ ಆಯೋಗ ಕೊನೆಗೂ ಮಂಗಳವಾರ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಅವರಿಗೆ ವರದಿ ಸಲ್ಲಿಸಿದೆ.1992 ರಲ್ಲಿ ಬಾಬ್ರಿ ಮಸೀದಿಯನ್ನು ಸಂಘಪರಿವಾರ ಧ್ವಂಸಗೊಳಿಸಿದ ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಎಂ.ಎಸ್.ಲಿಬೆರಾನ್ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು. ಆದರೆ ಆಯೋಗ ಬಾಬ್ರಿ ಧ್ವಂಸ ವಿಚಾರಣೆಗಾಗಿ ಸರಾಸರಿ 17ವರ್ಷಗಳನ್ನು ತೆಗೆದುಕೊಂಡಿದೆ. ತನಿಖೆಯ ಸಂದರ್ಭದಲ್ಲಿ ಅಂತಿಮ ವರದಿ ಸಲ್ಲಿಕೆಗಾಗಿ ಆಯೋಗ 48 ಬಾರಿ ವಿಸ್ತರಣೆಯನ್ನು ಪಡೆದುಕೊಂಡಿತ್ತು.ಇಂದು ಬೆಳಿಗ್ಗೆ ಲಿಬೆರಾನ್ ಅವರು ಗೃಹ ಸಚಿವ ಪಿ.ಚಿದಂಬರಂ ಅವರ ಸಮ್ಮುಖದಲ್ಲಿ ಕೊನೆಗೂ ಬಾಬ್ರಿ ಧ್ವಂಸ ಪ್ರಕರಣದ ತನಿಖೆಯ ಅಂತಿಮ ವರದಿಯನ್ನು ಪ್ರಧಾನಿ ಸಿಂಗ್‌ಗೆ ಸಲ್ಲಿಸಿದರು. ಆದರೆ ವರದಿಯಲ್ಲಿನ ಅಂಶಗಳು ಸದ್ಯಕ್ಕೆ ಲಭ್ಯವಾಗಿಲ್ಲ. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿನ ಐತಿಹಾಸಿಕ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಇದರಿಂದಾಗಿ ದೇಶಾದ್ಯಂತ ಕೋಮುದಳ್ಳುರಿ ಹೊತ್ತಿ ಉರಿದಿತ್ತು. ಘಟನೆಯ 10ದಿನಗಳಲ್ಲಿಯೇ ತನಿಖೆಗಾಗಿ ಆಯೋಗವನ್ನು ನೇಮಕ ಮಾಡಲಾಗಿತ್ತು. ಆದರೆ ದೇಶದಲ್ಲಿ ನಡೆದ ಘಟನೆಯೊಂದರ ತನಿಖೆಗಾಗಿ ಅತಿ ದೀರ್ಘಾವಧಿ ಸಮಯವನ್ನು ಲಿಬೆರಾನ್ ಆಯೋಗ ತೆಗೆದುಕೊಂಡಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.ಅಲ್ಲದೇ ನಿವೃತ್ತ ನ್ಯಾಯಾಧೀಶ ಲಿಬೆರಾನ್ ಹಾಗೂ ಆಯೋಗದ ಇತರ ಸದಸ್ಯರಿಗೆ ನೀಡಿದ ಸಂಬಳದ ವೆಚ್ಚ ಸೇರಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ಅಂದಾಜು 8ಕೋಟಿ ರೂಪಾಯಿ ವ್ಯಯಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಹಲವು ಮಂದಿಯ ಹೇಳಿಕೆಯನ್ನು ಆಯೋಗ ದಾಖಲಿಸಿಕೊಂಡಿದೆ. ಆಡ್ವಾಣಿ-ಬಜರಂಗದಳ ಪಾತ್ರ ಬಹಿರಂಗ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಯ ಅಂತಿಮ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಘಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಸಂಘಪರಿವಾರದ ಪಾತ್ರಗಳ ಬಣ್ಣ ಬಯಲಾಗಲಿದೆ.ಗಲ್ಲಿಗೇರಲು ಸಿದ್ದ-ಉಮಾ ಭಾರತಿ: ವರದಿ ಸಲ್ಲಿಕೆ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಫೈಯರ್ ಬ್ರ್ಯಾಂಡ್ ಉಮಾ ಭಾರತಿ ಅವರು, ಬಾಬ್ರಿ ಮಸೀದಿ ಧ್ವಂಸವನ್ನು ಸಮರ್ಥಿಸಿಕೊಂಡಿದ್ದು, ಇದಕ್ಕಾಗಿ ತಾನು ಗಲ್ಲಿಗೇರಲು ಕೂಡ ಸಿದ್ದ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ವಿವಾದದ ಕಿಚ್ಚನ್ನು ಹಚ್ಚಿದ್ದಾರೆ.ಕೆಲವು ವ್ಯಕ್ತಿಗಳಿಂದಾಗಿ ವರದಿ ವಿಳಂಬ: ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವರದಿ ಸಲ್ಲಿಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಯೋಗ ಲಿಬೆರಾನ್, ಕೆಲವು ವ್ಯಕ್ತಿಗಳ ಅಸಹಕಾರದಿಂದಾಗಿ ವರದಿ ಸಲ್ಲಿಕೆಗೆ ವಿಳಂಬವಾಗಿದೆ ಎಂದ ಅವರು, ಸಂಸತ್‌ನಲ್ಲಿ ವರದಿ ಮಂಡಿಸಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಅದಕ್ಕೂ ಮುನ್ನ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.ಬಿಜೆಪಿ ಗರಂ: ವರದಿ ವಿಳಂಬಕ್ಕೆ ಭಾರತೀಯ ಜನತಾ ಪಕ್ಷ ಕಾರಣ ಎಂಬ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ವರದಿ ವಿಳಂಬಕ್ಕೆ ನಾವು ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ನಾವು ನಿರಪರಾಧಿಗಳು, ಅಲ್ಲದೇ ಸಕಾಲಕ್ಕೆ ನಾವು ವಿವರಣೆ ನೀಡಲು ಆಯೋಗದ ಮುಂದೆ ಹಾಜರಾಗಿರುವುದಾಗಿಯೂ ಹೇಳಿದರು. ಆದರೂ ದೇಶದ ಬಹುಸಂಖ್ಯಾತ ಹಿಂದೂಗಳ ಇಚ್ಛೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ನಮ್ಮ ಗುರಿ ಎಂದರು. |