ಸಂಸತ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿನ ಪ್ರಮುಖ ರೂವಾರಿಯಾಗಿರುವ ಮೊಹಮ್ಮದ್ ಅಫ್ಜಲ್ ಗುರುವನ್ನು ನೇಣಿಗೇರಿಸುವ ನಿರ್ಧಾರ ಬಗ್ಗೆ ಇನ್ನೂ ಎರಡು ವರ್ಷಗಳ ಕಾಲ ಕಾಯಬೇಕಾಗುತ್ತದೆ ಎಂದಿರುವ ಕೇಂದ್ರ ಸರ್ಕಾರ, ಆ ನಿಟ್ಟಿನಲ್ಲಿ ಕ್ರಮ ಪ್ರಕಾರವಾಗಿ ತಿಂಗಳಿಗೊಂದರಂತೆ ಗಲ್ಲು ಶಿಕ್ಷೆಗೆ ಒಳಗಾಗಿರುವ ಆರೋಪಿಗಳ ಕ್ಷಮಾದಾನ ಅರ್ಜಿಯನ್ನು ಪರಿಶೀಲನೆ ನಡೆಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ.
2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಫ್ಜಲ್ ಗುರುಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಗುರು ಪತ್ನಿ ಅಫ್ಜಲ್ ಗುರುಗೆ ಕ್ಷಮಾದಾನ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಗಲ್ಲುಶಿಕ್ಷೆ ಕುರಿತಂತೆ ಸರ್ಕಾರದ ಮುಂದಿರುವ 28 ಕ್ಷಮಾದಾನ ಅರ್ಜಿ ಪರಿಶೀಲನೆ ಪಟ್ಟಿಯಲ್ಲಿ ಗುರುವಿನದ್ದು 22ನೇ ಸ್ಥಾನ.
ಅಫ್ಜಲ್ ಗಲ್ಲು ಶಿಕ್ಷೆ ಕುರಿತಂತೆ ವಿರೋಧ ಪಕ್ಷ ಸೇರಿದಂತೆ ದೇಶಾದ್ಯಂತ ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಅದಕ್ಕೆ ಪೂರಕ ಎಂಬಂತೆ ಇತ್ತೀಚೆಗಷ್ಟೇ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ ಒಬ್ಬರನ್ನು ಹೆಕ್ಕಿ ತೆಗೆದು ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಈಗಾಗಲೇ 28 ಮಂದಿ ಗಲ್ಲು ಶಿಕ್ಷೆಗೆ ಒಳಗಾಗಿದ್ದು, ಅವರೆಲ್ಲರ ಕ್ಷಮಾದಾನ ಅರ್ಜಿಯ ಪರಿಶೀಲನೆ ಇನ್ನಷ್ಟೇ ನಡೆಯಬೇಕಾಗಿದೆ. ಅದು ಕ್ರಮ ಪ್ರಕಾರವಾಗಿ ನಡೆಯಬೇಕು. ಈ ಪಟ್ಟಿಯಲ್ಲಿ ಅಫ್ಜಲ್ 22ನೇ ಸ್ಥಾನದಲ್ಲಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಗಲ್ಲು ಶಿಕ್ಷೆ ಪ್ರಕರಣ ಕುರಿತಂತೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಇದೀಗ ಪ್ರತಿ ತಿಂಗಳು ಗಲ್ಲು ಶಿಕ್ಷೆಗೆ ಒಳಗಾದವರ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಸರ್ಕಾರ ಪಟ್ಟಿಯಲ್ಲಿರುವಂತೆ ಪ್ರತಿ ತಿಂಗಳು ಒಂದೊಂದು ಅರ್ಜಿಯನ್ನು ಶಿಫಾರಸು ಮಾಡಿ ರಾಷ್ಟ್ರಪತಿಗೆ ಕಳುಹಿಸಲಾಗುವುದು ಎಂದರು.
ರಾಷ್ಟ್ರಪತಿಗಳಿಗೆ ಪ್ರತಿ ತಿಂಗಳು ಒಂದು ಕ್ಷಮಾದಾನ ಅರ್ಜಿಯ ಬಗ್ಗೆಯಷ್ಟೇ ಪುರಸ್ಕರಿಸುವ ಅಥವಾ ತಿರಸ್ಕರಿಸುವ ತೀರ್ಮಾನ ಕೈಗೊಳ್ಳಲು ಸಾಧ್ಯ. ಆ ನೆಲೆಯಲ್ಲಿ 22ನೇ ಸ್ಥಾನದಲ್ಲಿರುವ ಅಫ್ಜಲ್ ಗುರು ಕ್ಷಮಾದಾನದ ಅರ್ಜಿಯ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲು ಸುಮಾರು 2ವರ್ಷ ಕಾಲ ಹಿಡಿಯಬಹುದಾಗಿದೆ ಎಂದು ಚಿದಂಬರಂ ವಿವರಿಸಿದರು.
2001 ಡಿಸೆಂಬರ್ 13ರಂದು ಸಂಸತ್ ಮೇಲೆ ಪಾತಕಿ ಅಫ್ಜಲ್ ಗುರು ತಂಡ ದಾಳಿ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2002 ಡಿಸೆಂಬರ್ 18ರಂದು ವಿಚಾರಣಾಧೀನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕೆಳ ಕೋರ್ಟ್‌ನ ತೀರ್ಪನ್ನು 2003 ಅಕ್ಟೋಬರ್ 29ರಂದು ದೆಹಲಿ ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಬಳಿಕ 2005 ಆಗೋಸ್ಟ್ 4ರಂದು ಅಫ್ಜಲ್ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಕಾಯಂಗೊಳಿಸಿ ತೀರ್ಪು ನೀಡಿತ್ತು. ಸುಪ್ರೀಂನ ಆದೇಶದನ್ವಯ ವಿಚಾರಣಾಧೀನ ನ್ಯಾಯಾಲಯ ಅಫ್ಜಲ್ ಗುರುವನ್ನು 2006ರ ಅಕ್ಟೋಬರ್ 20ರಂದು ಗಲ್ಲಿಗೇರಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಅಫ್ಜಲ್ ಪತ್ನಿ ತಬ್‌ಸ್ಸಮ್ ಪತಿಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ಮೊರೆ ಹೋದ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆ ಈವರೆಗೂ ಜಾರಿಯಾಗಿಲ್ಲ.
ಗಲ್ಲುಶಿಕ್ಷೆ ಆರೋಪಿತರ ಪಟ್ಟಿಯಲ್ಲಿನ ಹೆಸರಿನಲ್ಲಿ ಅಫ್ಜಲ್ ಗುರು ಪ್ರಕರಣ ಹೆಚ್ಚು ವಿವಾದಕ್ಕೆ ಒಳಗಾಗಿದೆ. ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಾದ ಮುರುಗನ್, ಶಾಂತನ್ ಹಾಗೂ ಪೆರಾರಿವಾಲನ್ ಕೂಡ ಕ್ಷಮಾದಾನದ ಅರ್ಜಿಯ 8ನೇ ಸ್ಥಾನದಲ್ಲಿದ್ದು, ಅವರಿಗಿನ್ನೂ ಶಿಕ್ಷೆಯಾಗಿಲ್ಲ. ರಾಜೀವ್ ಹತ್ಯೆ ಘಟನೆಯಲ್ಲಿ ಗಲ್ಲು ಶಿಕ್ಷೆಗೊಳಗಾಗಿದ್ದ ಮುರುಗನ್ ಪತ್ನಿ ನಳಿನಿಗೆ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಶಿಫಾರಸ್‌ನಂತೆ ಜೀವಾವಧಿ ಶಿಕ್ಷೆಗೆ ಇಳಿಸಿದ್ದರು.
|