ಮೆಕ್ಕಾದ ಪವಿತ್ರ ಹಜ್ ಯಾತ್ರೆಗೆ ಹೊರಡುವ ಯಾತ್ರಾರ್ಥಿಗಳಿಗೆ ನೀಡಲಾಗುವ ತಾತ್ಕಾಲಿಕ ಪಾಸ್‌ಪೋರ್ಟ್ ಅನ್ನು ಪೊಲೀಸ್ ಪರಿಶೀಲನೆ ಇಲ್ಲದೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತು ದೆಹಲಿ ಮತ್ತು ಬೆಂಗಳೂರಿನಲ್ಲಿ ಜೂನ್ 8ಮತ್ತು 10ರಂದು ಎರಡು ಬಾರಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಎನ್. ರವಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದಾಗಿ ಹಜ್ ಸಮಿತಿ ಮಂಗಳವಾರ ತಿಳಿಸಿದೆ. ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗಾಗಿ ಸೌದಿ ಅರೇಬಿಯಾ ಎಂಟು ತಿಂಗಳ ಸಪ್ರಮಾಣದ ಪಾಸ್‌ಪೋರ್ಟ್ ಅನ್ನು ನೀಡುತ್ತದೆ. ಆದರೆ ನಂತರ ಇದು ನವೀಕರಣಗೊಳ್ಳುವುದಿಲ್ಲ.
ಆ ನಿಟ್ಟಿನಲ್ಲಿ ಕೇವಲ ಎರಡು ತಿಂಗಳ ಕಾಲಾವಧಿಯ ಹಜ್ ಯಾತ್ರೆಗಾಗಿ ತೆರಳುವ ಯಾತ್ರಾರ್ಥಿಗಳಿಗಾಗಿ ಹೆಚ್ಚಿನ ಶ್ರಮವಾಗದಿರುವಂತೆ ತಾತ್ಕಾಲಿಕ ಪಾಸ್‌ಪೋರ್ಟ್ ನೀಡಿಕೆಗೆ ಪೊಲೀಸ್ ಪರಿಶೀಲನೆ ಅಗತ್ಯವಿಲ್ಲ ಎಂದು ಸರ್ಕಾರ ಈ ನಿರ್ಧಾರ ತಳೆದಿದೆ ಎಂದು ಹಜ್ ಸಮಿತಿಯ ಕಾರ್ಯನಿರ್ವಾಹಕ ಮುಖ್ಯ ಅಧಿಕಾರಿ ಮೊಹ್ಮದ್ ಓವೈಸ್ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಆದರೆ ಒಂದು ವೇಳೆ ಯಾರಾದರು ಹಜ್ ಯಾತ್ರಾರ್ಥಿಗಳಿಗೆ ಕಾಯಂ ಪಾಸ್‌ಪೋರ್ಟ್‌ನ ಅಗತ್ಯವಿದ್ದಲ್ಲಿ ಮಾತ್ರ ಅದನ್ನು ಪೊಲೀಸ್ ಪರಿಶೀಲನೆಗೆ ಕಳುಹಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಹಜ್ ಸಮಿತಿ 3.57ಲಕ್ಷ ಹಜ್ ಯಾತ್ರಾರ್ಥಿಗಳ ಅರ್ಜಿಯನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಹಜ್ ಸಮಿತಿಯ ಕೋಟಾದ 1.04ಲಕ್ಷ, ಪ್ರೈವೇಟ್ ಸೆಕ್ಟರ್ ಕೋಟಾದ 45ಸಾವಿರ ಹಾಗೂ ಉಳಿದದ್ದು ಸರ್ಕಾರದ ಕೋಟಾದಲ್ಲಿನ ಯಾತ್ರಾರ್ಥಿಗಳು ಸೇರಿದ್ದಾರೆ ಎಂದು ಅವರು ಹೇಳಿದರು. |