ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಲೆಬರ್ಹಾನ್ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ಬಳಿಕ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಬಿಜೆಪಿ ಹೇಳಿರುವಂತೆಯೇ, ಆ ವರದಿಯಲ್ಲಿ ಏನಿದೆ ಎಂಬ ಅಂಶ ತಿಳಿಯುವ ಮೊದಲೇ ಬಿಜೆಪಿಯು 'ತಪ್ಪಿತಸ್ಥ ಭಾವನೆ'ಯಿಂದ ನರಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಬಿಜೆಪಿಯ 'ಅತಿಯಾದ ಪ್ರತಿಭಟನೆ' ಧ್ವನಿಯು ಅದರ ತಪ್ಪಿತಸ್ಥ ಮನೋಭಾವದ ಪ್ರತೀಕ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಮಂಗಳವಾರ ಆರೋಪಿಸಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಹಿರಿಯ ಮುಖಂಡ, ಪಕ್ಷದ ಉತ್ತರ ಪ್ರದೇಶ ಘಟಕದ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಮಾತನಾಡಿ, ಬಾಬರಿ ಮಸೀದಿ ಧ್ವಂಸವು ಪೂರ್ವ ಯೋಜಿತ ಸಂಚು ಮತ್ತು ಇದರ ಹಿಂದೆ ಯಾರಿದ್ದರು ಎಂಬುದೆಲ್ಲವೂ ಇಡೀ ಜಗತ್ತಿಗೆ ಗೊತ್ತಿದೆ. ಈ ವರದಿಯನ್ನು ನಾವು ಜನರ ಮುಂದಿಡುತ್ತೇವೆ. ಇಡೀ ವಿಶ್ವವೇ ಬಾಬರಿ ಮಸೀದಿ ಧ್ವಂಸದಲ್ಲಿ ಯಾವೆಲ್ಲಾ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆಂಬುದನ್ನು ಟಿವಿಯಲ್ಲಿ ನೋಡಿದೆ. ಇದರಲ್ಲಿ ಸಾಬೀತುಪಡಿಸುವಂಥದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲದೆ, ಕೇಸರಿ ಬಣದ ಮುಖಂಡರಾದ ಎಲ್.ಕೆ.ಆಡ್ವಾಣಿ, ಉಮಾ ಭಾರತಿ, ವಿನಯ್ ಕಟಿಯಾರ್, ಮುರಳಿ ಮನೋಹರ ಜೋಶಿ ಮತ್ತು ಕಲ್ಯಾಣ್ ಸಿಂಗ್ ಅವರನ್ನೂ ದಿಗ್ವಿಜಯ್ ಹೆಸರಿಸಿದರು.ಸಂಸತ್ತಿನಲ್ಲಿ ಮಂಡಿಸಲು ಸಿಪಿಐ ಆಗ್ರಹ:ಲೆಬರ್ಹಾನ್ ಆಯೋಗದ ತನಿಖಾ ವರದಿಯನ್ನು ಸಂಸತ್ತಿನಲ್ಲಿ ತಕ್ಷಣವೇ ಮಂಡಿಸುವಂತೆ ಆಗ್ರಹಿಸಿರುವ ಸಿಪಿಐ, ಸರಕಾರವು ಕ್ರಮ ಕೈಗೊಳ್ಳುವ ವರದಿಯನ್ನು ಕೂಡ ಮಂಡಿಸುವಂತೆ ಒತ್ತಾಯಿಸಿದೆ. ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, ಮುಂಬೈ ಗಲಭೆ ಕುರಿತಾಗಿನ ಶ್ರೀಕೃಷ್ಣ ಆಯೋಗದ ವರದಿಯನ್ನೂ ಸಂಸತ್ತಿನ ಮುಂದಿಡದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಪ್ರತಿಕ್ರಿಯೆ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕೆ ತಮ್ಮ ಪಕ್ಷವು ಬದ್ಧವಾಗಿದೆ ಎಂದು ಪ್ರತಿಕ್ರಿಯಿಸಿರುವ ಬಿಜೆಪಿ, ಸಂಸತ್ತಿನಲ್ಲಿ ಲೆಬರ್ಹಾನ್ ವರದಿಯನ್ನು ಮಂಡಿಸಿದ ಬಳಿಕ ರಚನಾತ್ಮಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದೆ.ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರದಿಯಲ್ಲಿ ಏನಿದೆ ಎಂಬುದು ತಿಳಿದಿಲ್ಲ. ಸಂಸತ್ತಿನಲ್ಲಿ ಮಂಡಿಸಿದ ನಂತರ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ ಎಂದರಲ್ಲದೆ, ಬಾಬರಿ ಮಸೀದಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿ ನಾಯಕರ ಅಸಹಕಾರದಿಂದಾಗಿ ವರದಿ ಮಂಡನೆಗೆ ವಿಳಂಬವಾಯಿತು ಎಂಬ ಕಾಂಗ್ರೆಸ್ ಆರೋಪಗಳನ್ನು ತರಾಟೆಗೆ ತೆಗೆದುಕೊಂಡರು.ಬಿಜೆಪಿಯ ಎಲ್ಲ ನಾಯಕರೂ ವಿಚಾರಣೆಗೆ ಹಾಜರಾಗಿದ್ದಾರೆ ಮತ್ತು ತಮ್ಮ ಹೇಳಿಕೆ ನೀಡಿದ್ದಾರೆ ಎಂದ ಪ್ರಸಾದ್, ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದೇ ಈ ವಿವಾದಕ್ಕೆ ಪರಿಹಾರ ಎಂಬುದು ಜನಾಭಿಪ್ರಾಯವಾಗಿದೆ ಮತ್ತು ಬಿಜೆಪಿಯೂ ಇದನ್ನೇ ಬಯಸುತ್ತದೆ ಎಂದರು.1992 ರಲ್ಲಿ ಬಾಬರಿ ಮಸೀದಿ ಧ್ವಂಸವಾದ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಲೆಬರ್ಹಾನ್ ಆಯೋಗವು, ಈ ಕುರಿತ ತನಿಖಾ ವರದಿ ಪೂರ್ಣಗೊಳಿಸಲು 48 ಬಾರಿ ವಿಸ್ತರಣೆ ಪಡೆದು 17 ವರ್ಷಗಳನ್ನು ತೆಗೆದುಕೊಂಡಿದ್ದು, ದೇಶದ ಅತ್ಯಂತ ಸುದೀರ್ಘ ತನಿಖಾ ಆಯೋಗ ಎಂಬ ಹೆಗ್ಗಳಿಕೆಯನ್ನೂ ಗಳಿಸಿಕೊಂಡಿದೆ.ಗೋವಿಂದಾಚಾರ್ಯ ಪ್ರತಿಕ್ರಿಯೆ: ಲೆಬರ್ಹಾನ್ ಆಯೋಗದ ವರದಿಯಲ್ಲಿ ಏನಿದೆ ಎಂಬುದು ತನಗೆ ತಿಳಿದಿಲ್ಲ, ಆದರೆ ಹಿಂದುತ್ವದ ಮೂಲವು ಕೇವಲ ರಾಮ ಜನ್ಮಭೂಮಿ ವಿಷಯವನ್ನು ಮಾತ್ರವೇ ಅವಲಂಬಿಸಿಲ್ಲ ಎಂದು ಬಿಜೆಪಿಯ ಮಾಜಿ ನಾಯಕ ಎನ್.ಗೋವಿಂದಾಚಾರ್ಯ ಹೇಳಿದ್ದಾರೆ.ಗೋವಿಂದಾಚಾರ್ಯ ಅವರು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಲ್ಲೊಬ್ಬರಾಗಿರುವ ಉಮಾಭಾರತಿಯ ಆತ್ಮೀಯರಲ್ಲೊಬ್ಬರಾಗಿದ್ದು, ವರದಿ ಮಂಡನೆ ವಿಳಂಬವಾಗಿದೆ ಎಂದು ಹೇಳಿದರು. |