ಅಯೋಧ್ಯೆಯಲ್ಲಿನ ವಿವಾದಿತ ಬಾಬರಿ ಮಸೀದಿ ಧ್ವಂಸ ಪ್ರಕರಣದ ಹೊಣೆ ಹೊರಲು ತಾನು ಸಿದ್ಧ ಎಂದು ಘೋಷಿಸಿರುವ ಭಾರತೀಯ ಜನಶಕ್ತಿ ಪಾರ್ಟಿ ಅಧ್ಯಕ್ಷೆ, ಬಿಜೆಪಿಯ ಮಾಜಿ ನಾಯಕಿ ಉಮಾ ಭಾರತಿ, ತಪ್ಪಿತಸ್ಥೆ ಎಂದು ಸಾಬೀತಾದರೆ ಗಲ್ಲಿಗೇರಲೂ ಸಿದ್ಧ ಎಂದು ಹೇಳುವ ಮೂಲಕ ಮತ್ತೊಂದು ಕಿಡಿ ಹಚ್ಚಿದ್ದಾರೆ.ಒಬ್ಬ ಉತ್ತಮ ಕಮಾಂಡರ್‌ನಂತೆ, ಬಾಬರಿ ಮಸೀದಿ ಧ್ವಂಸದ ಹೊಣೆ ಹೊರಲು ನಾನು ರೆಡಿ ಎಂದು ಮಂಗಳವಾರ ಹೇಳಿದ ಅವರು, 17 ವರ್ಷಗಳ ಬಳಿಕ ಈ ವರದಿಯನ್ನು ಸಲ್ಲಿಸಿರುವುದು ಮುಸ್ಲಿಂ ಸಮುದಾಯದ ಓಲೈಕೆಯ ಪ್ರಯತ್ನ ಎಂದು ಟೀಕಿಸಿದರು.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಾವಿನ ಬಳಿಕ ಕಾಂಗ್ರೆಸ್ ಪ್ರಾಯೋಜನೆಯಲ್ಲಿ ನಡೆದ 20 ಸಾವಿರ ಮಂದಿ ಸಿಖ್ಖರ ನರಮೇಧದಲ್ಲಿ ಒಬ್ಬನೇ ಒಬ್ಬ ಹೊಣೆಗಾರನನ್ನು ಪತ್ತೆ ಹಚ್ಚಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ, ಇದೀಗ ಈ ವರದಿಯ ಮೂಲಕ ಹಿಂದೂ ಮತ್ತು ಮುಸ್ಲಿಮರನ್ನು ತನ್ನ ರಾಜಕೀಯ ಉದ್ದೇಶಗಳಿಗಾಗಿ ವಿಭಜಿಸಲು ನೋಡುತ್ತಿದೆ ಎಂದು ಆರೋಪಿಸಿದರು.1992 ರಲ್ಲಿ ಅಯೋಧ್ಯೆಯಲ್ಲಿ ಯಾವುದೇ ರೀತಿಯ ಕರಸೇವೆಗೆ ಪಿ.ವಿ.ನರಸಿಂಹರಾವ್ ಸರಕಾರ ಅವಕಾಶ ನೀಡದಿರುವ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ನೆರೆದಿದ್ದ ಐದು ಲಕ್ಷಕ್ಕೂ ಹೆಚ್ಚು ಜನರನ್ನು ನಿಯಂತ್ರಿಸುವುದು ಯಾರಿಗೇ ಆದರೂ ಕಷ್ಟದ ಸಂಗತಿಯಾಗಿತ್ತು ಎಂದ ಉಮಾ, ಆರೆಸ್ಸೆಸ್ ನಾಯಕ ಹೊ.ವೆ.ಶೇಷಾದ್ರಿ, ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಷಿ ಮತ್ತು ನಾನು, ಮಸೀದಿ ಒಡೆಯದಂತೆ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದೆವು. ಆದರೆ ಆ ಬಳಿಕ ಆದದ್ದೆಲ್ಲಾ ದಿಢೀರ್ ಆಗಿ ನಡೆದ ಬೆಳವಣಿಗೆ ಎಂದು ಹೇಳಿದರು.ಆರೆಸ್ಸೆಸ್ ಪ್ರತಿಕ್ರಿಯೆ: 1992ರ ಡಿಸೆಂಬರ್ 6ರಂದು ನಡೆದ ಘಟನೆಯು ಜನತೆಯ ಹತ್ತಿಕ್ಕಿದ ಆಕ್ರೋಶ ಸ್ಫೋಟಗೊಂಡ ಫಲವಾಗಿತ್ತು ಎಂದು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್), ಇದಕ್ಕಾಗಿ ಯಾರಾದರೊಬ್ಬರನ್ನು ವ್ಯಕ್ತಿಗತವಾಗಿ ಹೊಣೆಯಾಗಿಸುವುದು 'ರಾಜಕೀಯ ಕುತರ್ಕವಾಗುತ್ತದೆ' ಎಂದು ಹೇಳಿದೆ. ದೆಹಲಿಯಲ್ಲಿ ಅಂದು ಇದ್ದ ಸರಕಾರ ಎಸಗಿದ್ದ ಪ್ರಮಾದಗಳ ಫಲವೇ ಈ ಘಟನೆ ಎಂದು ಆರೆಸ್ಸೆಸ್ ನಾಯಕ ರಾಮ ಮಾಧವ್ ಅವರು ಸುದ್ದಿಗಾರರಿಗೆ ಹೇಳಿದರು. ಮತ್ತಷ್ಟು ಓದಿಗೆ:17 ವರ್ಷಗಳ ಬಳಿಕ ಲೆಬರ್ಹಾನ್ ವರದಿ ಪ್ರಧಾನಿಗೆ ಸಲ್ಲಿಕೆ ಅಯೋಧ್ಯೆ: ಬಿಜೆಪಿಗೆ ತಪ್ಪಿತಸ್ಥ ಭಾವನೆ: ಕಾಂಗ್ರೆಸ್ ಟೀಕೆ |