ಪ್ರಸಕ್ತವಾಗಿ ಚೀನಾದಲ್ಲಿ ಭಾರತದ ರಾಯಭಾರಿಯಾಗಿರುವ ನಿರುಪಮಾ ರಾವ್ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಹಾಲಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಮೂರು ವರ್ಷಗಳ ಸೇವೆಯ ನಂತರ ಜುಲೈ 31ರಂದು ನಿವೃತ್ತರಾಗಲಿದ್ದು, ಬಳಿಕ ನಿರುಪಮಾ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ.
1973ರ ಬ್ಯಾಚಿನ ಐಎಫ್‌ಎಸ್ ಅಧಿಕಾರಿ ನಿರುಪಮಾ ರಾವ್ ಈಗಾಗಲೇ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದು, ಚೋಕಿಲಾ ಅಯ್ಯರ್ ಬಳಿಕ ವಿದೇಶಾಂಗ ಕಾರ್ಯದರ್ಶಿಯಾಗುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿರುಪಮಾ ರಾವ್ ಅವರದೇ ಬ್ಯಾಚಿನಲ್ಲಿದ್ದ ನಳಿನ್ ಸೂರಿ ಅವರೂ ಈ ಪ್ರತಿಷ್ಠಿತ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಪತ್ನಿಯಾಗಿರುವ ನಿರುಪಮಾ ರಾವ್ ಅವರು ಬೆಂಗಳೂರು, ಪುಣೆ, ಲಖ್ನೋ, ಕೂನೂರ್ ಸಹಿತ ಹಲವೆಡೆ ತಮ್ಮ ಆರಂಭಿಕ ಶಿಕ್ಷಣ ಪಡೆದಿದ್ದರು. |