ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತಿತರರು ಧ್ವಂಸಕ್ಕೆ ನೇರ ಕಾರಣ ಎಂದು 17ವರ್ಷಗಳ ಸುದೀರ್ಘ ತನಿಖೆಯ ನಂತರ ಮಂಗಳವಾರ ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ ಎಂದು ಸಿಎನ್‌ಎನ್-ಐಬಿಎನ್ ವರದಿ ತಿಳಿಸಿದೆ.ಅಲ್ಲದೇ ಮಸೀದಿ ಧ್ವಂಸ ತಡೆಯಲು ಅಂದಿನ ಪ್ರಧಾನಿ ನರಸಿಂಹ ರಾವ್ ಸೂಕ್ತ ಕ್ರಮ ಕೈಗೊಳ್ಳಲಿಲ್ಲ, ಆಡ್ವಾಣಿ ರಥ ಯಾತ್ರೆ ಮಾಡಿದ್ದು ತಪ್ಪು, ಇಡೀ ಘಟನೆಯಲ್ಲಿ ವಿಎಚ್‌ಪಿ ನಾಯಕರ ಪಾತ್ರ ಪ್ರಮುಖ ಎಂಬ ಅಂಶ ವರದಿಯಲ್ಲಿದೆ ಎನ್ನಲಾಗಿದೆ.ಧ್ವಂಸ ಘಟನೆಗೆ ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ, ಉಮಾ ಭಾರತಿ ನೇರ ಹೊಣೆ ಎಂಬುದಾಗಿಯೂ, ವಿಎಚ್‌ಪಿ ನಾಯಕರಾದ ಗಿರಿಜಾ ಕಿಶೋರ್ ವ್ಯಾಸ್, ಅಶೋಕ್ ಸಿಂಘಾಲ್, ಬಜರಂಗದಳ, ವಿನಯ್ ಕಟಿಯಾರ್ ಪಾತ್ರ ಖಂಡನೀಯ ಎಂದು ಹೇಳಿದೆ ಎನ್ನಲಾಗಿದೆ. ವರದಿ ಸಲ್ಲಿಕೆಯ ವಿಳಂಬದ ಹಿಂದೆ ಬಿಜೆಪಿ ಪಿತೂರಿ ಕಂಡಿದ್ದರೆ, ವರದಿ ಸಲ್ಲಿಸಿದ ಮೇಲೆ ಮನದಲ್ಲಿ ನಿರಾಳತೆ ಮೂಡಿದೆ ಎಂದು ನ್ಯಾ.ಲಿಬರ್ಹಾನ್ ಹೇಳಿದ್ದಾರೆ. ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ, ತಾನು ಕೈಗೊಂಡ ಕ್ರಮಗಳೊಂದಿಗೆ ವರದಿಯನ್ನು ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಮಂಡಿಸುವುದಾಗಿ ಘೋಷಿಸಿದೆ. ಸಾವಿರಕ್ಕೂ ಅಧಿಕ ಪುಟ: ಲಿಬರ್ಹಾನ್ ಸಲ್ಲಿಸಿರುವ ವರದಿಯು ಸಾವಿರಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ವರದಿಯನ್ನು ನಾಲ್ಕು ಭಾಗಗಳಲ್ಲಿ ನೀಡಲಾಗಿದೆ. ಅಯೋಧ್ಯೆಯ ಐತಿಹಾಸಿಕ ಮತ್ತು ಧಾರ್ಮಿಕ ಆಯಾಮ ಮತ್ತು ಹಿಂದು ಸಮಾಜದಲ್ಲಿ ಶ್ರೀರಾಮ ಪ್ರಸ್ತುತತೆಯ ವಿವರದೊಂದಿಗೆ ವರದಿ ಆರಂಭವಾಗುತ್ತದೆ. ಮೊದಲೆರಡು ಭಾಗಗಳಲ್ಲಿ ಭಾರತದಲ್ಲಿ ಧರ್ಮಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಲಾಗಿದೆ. ಮೂರನೇ ಭಾಗದಲ್ಲಿ ಬಾಬ್ರಿ ಮಸೀದಿ ಧ್ವಂಸದಲ್ಲಿ ಪ್ರಮುಖ ವ್ಯಕ್ತಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ವರದಿ ವಿವರಿಸಿದೆ. |