ಭಾರತದ ವಾಣಿಜ್ಯ ನಗರಿಯಲ್ಲಿ ಬಹುಕೋಟಿ ವೆಚ್ಚದ ಬಾಂದ್ರಾ-ವರ್ಲಿ ಪ್ರಥಮ ಸಮುದ್ರ ಸಂಪರ್ಕ ಸೇತುವೆ ಮಂಗಳವಾರ ಉದ್ಘಾಟನೆಗೊಂಡಿದ್ದು, ಅದಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಅದಕ್ಕೆ ಪೂರಕ ಎಂಬಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಕೂಡ ಗಾಂಧಿ ಹೆಸರನ್ನಿಡುವುದಾಗಿ ಘೋಷಿಸಿದ್ದಾರೆ. ಆದರೆ ಸೇತುವೆಗೆ ರಾಜೀವ್ ಗಾಂಧಿ ಹೆಸರನ್ನಿಟ್ಟ ಬಗ್ಗೆ ಶಿವಸೇನೆ ಸೇರಿದಂತೆ ರಾಜ್ಯ ಹಲವು ವಿರೋಧಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.ಬಾಂದ್ರಾ-ವರ್ಲಿ ಸಂರ್ಪಕದ ಈ ಬಹುಕೋಟಿ ವೆಚ್ಚದ ವಂಡರ್ ಸೇತುವೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರನ್ನು ಇಡುವಂತೆ ನ್ಯಾಷನಲ್ ಕಾಂಗ್ರೆಸ್ ಪಕ್ಷದ ವರಿಷ್ಠ, ಕೃಷಿ ಸಚಿವ ಶರದ್ ಪವಾರ್ ಬೇಡಿಕೆ ಇಟ್ಟಿದ್ದು, ಕೊನೆಗೂ ಅದೇ ಹೆಸರನ್ನು ಅಂತಿಮಗೊಳಿಸುವುದಾಗಿ ಚೌಹಾಣ್ ಕೂಡ ಹೇಳಿದ್ದಾರೆ. ಇದರಿಂದಾಗಿ ಕೆರಳಿರುವ ವಿರೋಧಪಕ್ಷಗಳು ಹೆಸರನ್ನಿಡುವ ಮೊದಲು ಈ ಬಗ್ಗೆ ಚರ್ಚೆ ನಡೆಸಬೇಕಿತ್ತು ಎಂದು ಕಿಡಿಕಾರಿವೆ.ಈ ವಂಡರ್ ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ವೀರ್ ಸಾವರ್ಕರ್ ಅವರ ಹೆಸರನ್ನು ಇಡುವಂತೆ ಬಹುಕಾಲದಿಂದ ಬೇಡಿಕೆ ಇಡುತ್ತಲೇ ಬಂದಿದ್ದರೂ ಕೂಡ ಅದನ್ನೆಲ್ಲಾ ನಗಣ್ಯ ಮಾಡಿ, ಇದೀಗ ರಾಜೀವ್ ಗಾಂಧಿ ಹೆಸರನ್ನು ಇಟ್ಟಿರುವುದಕ್ಕೆ ಶಿವಸೇನೆಯ ಭರತ್ ರಾವುತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇತುವೆಗೆ ಹೆಸರನ್ನು ಇಡುವ ಮೊದಲು ರಾಜ್ಯ ಸರ್ಕಾರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕಿತ್ತು ಎಂದು ಈ ಸಂದರ್ಭದಲ್ಲಿ ಹೇಳಿದರು.ಶಿವಸೇನೆಯ ಆಕ್ಷೇಪಕ್ಕೆ ಬಿಜೆಪಿಯ ಹಿರಿಯ ಮುಖಂಡ ಗೋಪಿನಾಥ್ ಮುಂಡೆ ಕೂಡ ಧ್ವನಿಗೂಡಿಸಿದ್ದು, ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಸಾವರ್ಕರ್ ಅಲ್ಲದಿದ್ದರೂ ಸಹ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡಲು ಏನು ಅಡ್ಡಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಸೇತುವೆ ಉದ್ಘಾಟನೆಯಾಗುತ್ತಿದ್ದಂತೆಯೇ ತರಾತುರಿಯಲ್ಲಿ ರಾಜೀವ್ ಗಾಂಧಿ ಹೆಸರನ್ನಿಡುವ ಅಗತ್ಯವಾದರೂ ಏನಿತ್ತು ಎಂದು ಶಿವಸೇನೆಯ ವಕ್ತಾರ ನೀಲಮ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾವಿರಾರು ಸಂಸ್ಥೆಗಳಿಗೆ ಗಾಂಧಿ ಕುಟುಂಬದ ಹೆಸರನ್ನೇ ಇಡಲಾಗಿದೆ. ಆದರೂ ಕೂಡ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ, ಸ್ವಾತಂತ್ರ್ಯ ವೀರರ ಹೆಸರನ್ನಿಡಲು ಕಾಂಗ್ರೆಸ್ ಮುಂದಾಗುತ್ತಿಲ್ಲ ಎಂದು ದೂರಿದರು.' ರಾಜೀವ್ ಗಾಂಧಿ ಮುಂಬೈಯಲ್ಲೇ ಜನಿಸಿದವರು, ಅವರು ಈ ಮಣ್ಣಿನ ಮಗ ಹಾಗೂ ಈ ಸೇತುವೆಗೆ ಅವರ ಹೆಸರೇ ಸೂಕ್ತವಾದುದು' ಎಂದು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಮರ್ಥನೆ ನೀಡಿದರು. |