ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಎರಡು ದಿನಗಳಿಂದ ಪ್ರತಿಭಟನೆಕಾರರು ಬೀದಿಗಿಳಿದಿದ್ದಾರೆ. ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಇನ್ನೊಬ್ಬ ಯುವಕ ಮೃತಪಟ್ಟ ಬಳಿಕ ಪ್ರತಿಭಟನೆಕಾರರು ರೊಚ್ಚಿಗೆದ್ದಿದ್ದಾರೆ. ಏತನ್ಮಧ್ಯೆ ಬಾರಾಮುಲ್ಲಾದಲ್ಲಿ ನಿಯೋಜಿತವಾಗಿದ್ದ ಸಿಆರ್‌ಪಿಎಫ್ ಪಡೆಯನ್ನು ವಾಪಸು ಕರೆಸಿ ಸ್ಥಳೀಯ ಪೊಲೀಸರನ್ನು ಅಲ್ಲಿ ನಿಯೋಜಿಸಲಾಗುತ್ತಿದೆ.
ನಾವು ಸಿಆರ್‌ಪಿಎಫ್ ಎಲ್ಲ ಪಡೆಗಳನ್ನು ಸ್ಥಳಾಂತರಿಸಿ ಅದರ ಬದಲಿಗೆ ಸಶಸ್ತ್ರ ಪೊಲೀಸರನ್ನು ನಿಯೋಜಿಸಿದ್ದೇವೆ. ಅತೀ ಗಣ್ಯರು ಅಥವಾ ಮುಖ್ಯನೆಲೆಗಳನ್ನು ಕಾವಲು ಕಾಯುವ ಸಿಆರ್‌ಪಿಎಫ್ ಸಿಬ್ಬಂದಿ ಮಾತ್ರ ನಗರದಲ್ಲಿರುತ್ತಾರೆಂದು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಬಿ. ಶ್ರೀನಿವಾಸ್ ತಿಳಿಸಿದ್ದಾರೆ. ಪೊಲೀಸರು ಕಾನೂನು ಸುವ್ಯವಸ್ಥೆ ಪಾಲಿಸುತ್ತಾರೆಂದು ಅವರು ಹೇಳಿದ್ದಾರೆ. ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಇನ್ನೊಬ್ಬ ಯುವಕ ಅಸುನೀಗಿದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆದೇಶದ ಅನ್ವಯ ಸಿಆರ್‌ಪಿಎಫ್ ಪಡೆಯನ್ನು ಹಿಂದಕ್ಕೆ ಕಳಿಸಿದ ತಡರಾತ್ರಿಯ ಬೆಳವಣಿಗೆ ನಡೆದಿದೆ.
ಯಾವುದೇ ಪ್ರಚೋದನೆಯಿಲ್ಲದೇ ಗುಂಡು ಹಾರಿಸಿದ ಸಿಆರ್‌ಪಿಎಫ್ ಯೋಧನ ವಿರುದ್ಧ ಹತ್ಯೆಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆಯೆಂದು ಸರ್ಕಾರಿ ವಕ್ತಾರ ತಿಳಿಸಿದ್ದಾರೆ. ಪತಿಯನ್ನು ಕಸ್ಟಡಿಯಿಂದ ಬಿಡುಗಡೆ ಮಾಡಲು ಪೊಲೀಸರು ಲೈಂಗಿಕ ಸಹಕಾರಕ್ಕೆ ಕೇಳಿದರೆಂದು ಮಹಿಳೆಯೊಬ್ಬರು ಆರೋಪಿಸಿದ ಬಳಿಕ ಪ್ರತಿಭಟನೆ ಭುಗಿಲೆದ್ದು ಬಾರಾಮುಲ್ಲಾದಲ್ಲಿ ಮೂವರು ಸತ್ತಿದ್ದಾರೆ.
ಶೋಪಿಯಾನ್‌ನಲ್ಲಿ ಇಬ್ಬರು ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭದ್ರತಾ ಪಡೆಗಳ ಕೈವಾಡ ಶಂಕಿಸಿ ಭುಗಿಲೆದ್ದ ಪ್ರತಿಭಟನೆಯಿಂದ ಸರ್ಕಾರ ಬಿಕ್ಕಟ್ಟು ಎದುರಿಸುವಾಗಲೇ ಇನ್ನೊಂದು ವಿವಾದದ ಕಿಡಿ ಸ್ಫೋಟಿಸಿದೆ. |