ಈಗ ಎಲ್ಲವೂ ಉಚಿತಗಳ ಕಾಲ, ಒಂದು ಕೊಂಡರೆ ಒಂದು ಫ್ರೀ, ಎರಡು ಕೊಂಡರೆ ನಾಲ್ಕು ಉಚಿತ ಎಂಬಿತ್ಯಾದಿ ಮಾರುಕಟ್ಟೆ ತಂತ್ರಗಳ ಸರಮಾಲೆಯೇ ಎಲ್ಲೆಡೆ ಭರ್ಜರಿಯಾಗಿಯೇ ನಡೆಯುತ್ತಿದೆ. ಇದೇ 'ಫ್ರೀ'ಗಳ ಭರಾಟೆಗೆ ಹೊಸ ಸೇರ್ಪಡೆ ಅಂತ್ಯ ಸಂಸ್ಕಾರ!
ಹೌದು. ನೀವು ನಂಬಲೇ ಬೇಕು. ಆದರೆ ಒಂದು ಅಂತ್ಯಸಂಸ್ಕಾರಕ್ಕೆ ಮತ್ತೊಂದು ಫ್ರೀ ಎಂಬ ಕೊಡುಗೆ ಅಲ್ಲ. ಉತ್ತರ ಪ್ರದೇಶದ ರಾಜಧಾನಿ ಲಕ್ನೋ, ಅಲಹಾಬಾದ್, ಕಾನ್ಪುರ ಮತ್ತು ವಾರಣಾಸಿ ಸೇರಿದಂತೆ ವಿವಿಧ ನಗರಗಳಲ್ಲಿರುವ ಅಂತ್ಯ ಸಂಸ್ಕಾರ ಮೈದಾನಗಳಲ್ಲಿ ನಡೆಯುವ ಅಂತ್ಯ ಸಂಸ್ಕಾರ ಸೇವೆಗಳು 5 ಸಾವಿರ ರೂಪಾಯಿಯಿಂದ 50 ಸಾವಿರದವರೆಗೂ ಲಭ್ಯವಿದ್ದು, ವಿಭಿನ್ನ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.
ಹಣಕ್ಕೆ ತಕ್ಕಂತೆ ಸೇವೆ. ವಿಶೇಷ ಪ್ರಾರ್ಥನೆ ಬೇಕಿದ್ದರೆ ಇಂತಿಷ್ಟು, ಹವನ ಸಾಮಗ್ರಿಗೆ ಇಂತಿಷ್ಟು, ಮೋಕ್ಷ ಪ್ರಾಪ್ತಿಗಾಗಿ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರ ಮಾಡುವಲ್ಲಿಗೆ ಒಯ್ದು ಅಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸುವುದು... ಇವೆಲ್ಲವೂ ಪ್ಯಾಕೇಜ್‌ನಲ್ಲಿ ಸೇರುತ್ತವೆ.
"ನಮಗೆ 'ಆರ್ಡರ್' ಬಂದ ತಕ್ಷಣ ನಾವು ಸಿದ್ಧತೆ ಆರಂಭಿಸುತ್ತೇವೆ. ಕಡಿಮೆ ವೆಚ್ಚದ ಮರದಿಂದ ಹಿಡಿದು ಶ್ರೀಗಂಧದ ಮರದವರೆಗೆ, ಅಗ್ಗದ ಹೂವುಗಳಿಂದ ದುಬಾರಿ ಹೂವುಗಳು... ಎಲ್ಲವೂ ನಮ್ಮಲ್ಲಿ ಲಭ್ಯ. ಮಾತ್ರವಲ್ಲದೆ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರ ನಡೆಸುವಲ್ಲಿಗೆ ಕರೆತರುವ ವಾಹನಗಳು ಕೂಡ ವಿಭಿನ್ನ ದರಗಳಲ್ಲಿ ಬಾಡಿಗೆಗೆ ಲಭ್ಯ" ಎಂದಿದ್ದಾರೆ ಲಕ್ನೋದ ಭೈಂಸಾ ಕುಂಡ್ ಅಂತ್ಯಸಂಸ್ಕಾರ ಕೇಂದ್ರದ ಸುಭಾಷ್ ಮಿಶ್ರಾ.
ಹೆಚ್ಚಿನವರು ತಮ್ಮದೇ ವಾಹನಗಳನ್ನು ತರುತ್ತಾರೆ. ಆದರೆ ಕೆಲವರು ನಮ್ಮ ಸೇವೆ ಪಡೆಯುತ್ತಾರೆ. ದ್ವಿಚಕ್ರ, ತ್ರಿಚಕ್ರ ವಾಹನಗಳಿಂದ ಹಿಡಿದು ಸಣ್ಣ ಮತ್ತು ದೊಡ್ಡ ಜೀಪುಗಳು, ಮಿನಿ ಬಸ್ ನಮ್ಮಲ್ಲಿ ಲಭ್ಯವಿದೆ ಎಂದವರು ವಾರಣಾಸಿಯ ಮಣಿಕರ್ನಿಕಾ ಘಾಟ್‌ನ ಸಂತೋಷ್ ಶರ್ಮಾ. ದೇಶದ ಅತ್ಯಂತ ಪವಿತ್ರ ತಾಣಗಳಲ್ಲೊಂದಾಗಿರುವ ವಾರಣಾಸಿಯಲ್ಲಿ ಅಂತ್ಯ ಸಂಸ್ಕಾರ ವಿಧಿಗಳ ವೆಚ್ಚವು 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೂ ಇರುತ್ತವೆ.
ದೇಶಾದ್ಯಂತ ಇಲ್ಲಿಗೆ ಜನರು ಬರುತ್ತಾರೆ ಮತ್ತು ಭಾರಿ ಪ್ರಮಾಣದಲ್ಲಿ ದಾನ ಧರ್ಮಾದಿಗಳನ್ನೂ ಕೈಗೊಳ್ಳುತ್ತಾರೆ. ಗೋ ದಾನ, ಬಡವರಿಗೆ ವಸ್ತ್ರದಾನ, ಬ್ರಾಹ್ಮಣರಿಗೆ ಸಂತರ್ಪಣೆ ಮುಂತಾದ ಕಾರ್ಯಗಳಲ್ಲಿ ತೊಡಗುತ್ತಾರೆ. ನಾವು ಕೂಡ ಈ ಸೇವೆಗಳನ್ನು ಒದಗಿಸುತ್ತೇವೆ. ಆದರೆ ಬಡಬಗ್ಗರಿಗೆ, ಬ್ರಾಹ್ಮಣರಿಗೆ ಮಾಡುವ ದಾನಗಳು ನಮ್ಮ ಪ್ಯಾಕೇಜ್‌ನಲ್ಲಿ ಒಳಗೊಂಡಿರುವುದಿಲ್ಲ ಎನ್ನುತ್ತಾರೆ ಶರ್ಮಾ. |