ಬಾಂದ್ರಾ-ವೊರ್ಲಿ ಸೇತುವೆಯಲ್ಲಿ ಬುಧವಾರ ಹೌಸ್‌ಫುಲ್. ಗಣ್ಯಾತಿಗಣ್ಯರು, ಜನಸಾಮಾನ್ಯರು ಸಮುದ್ರದ ತಾಂತ್ರಿಕ ಸೋಜಿಗದ ಸೇತುವೆ ಮೇಲೆ ಉಚಿತ ಪ್ರಯಾಣದ ಆನಂದ ಸವಿಯಲು ಮುಗಿಬಿದ್ದರು. ಇದರಿಂದಾಗಿ ಬಾಂದ್ರಾ ವೊರ್ಲಿ ಎರಡೂ ಕಡೆ ಗಂಟೆಗಟ್ಟಲೆ ವಾಹನದಟ್ಟಣೆ ಉಂಟಾಯಿತು. ಬಾಂದ್ರಾ ವೊರ್ಲಿ ಸಮುದ್ರ ಸೇತುವನ್ನು ಮಂಗಳವಾರ ಮಧ್ಯರಾತ್ರಿ ಸಂಚಾರಕ್ಕೆ ಮುಕ್ತಗೊಳಿಸಿದಾಗ ಅಲ್ಲಿ ಕೆಲವೇ ವಾಹನಗಳಿದ್ದವು.
ಆದರೆ ಬೆಳಕು ಹರಿಯುತ್ತಿದ್ದಂತೆ ವಾಹನಗಳು ಪ್ರವಾಹದೋಪಾದಿಯಲ್ಲಿ ಹರಿದುಬಂದವು. ಸೇತುವೆಯ ಸೌಂದರ್ಯ ಮತ್ತು ತಂಗಾಳಿಯಲ್ಲಿ ಪ್ರಯಾಣಿಸುವ ಆನಂದ ಸವಿಯಲು ಬಹುತೇಕ ಮಂದಿ ಯುವಜನರು ಮತ್ತು ಕುಟುಂಬಗಳು ನೆರೆದಿದ್ದರಿಂದ ತೀವ್ರ ವಾಹನದಟ್ಟಣೆ. ಹೀಗಾಗಿ 5.6 ಕಿಮೀ ಸೇತುವೆ ದಾಟಲು 8 ನಿಮಿಷಗಳ ಅವಧಿಗೆ ಬದಲು ತೆಗೆದುಕೊಂಡಿದ್ದು ಒಂದು ಗಂಟೆಗೂ ಹೆಚ್ಚು ಕಾಲ.
ಆದರೆ ಬುಧವಾರ ಮಾತ್ರ ಮಹೀಮ್ ಕಾಸ್‌ವೇನಲ್ಲಿ ಮಾತ್ರ ವಾಹನಗಳು ಸರಾಗವಾಗಿ ಹರಿದುಹೋದವು. ವೊರ್ಲಿ ಮತ್ತು ಬಾಂದ್ರಾ ನಡುವೆ ಏಕೈಕ ಸಂಪರ್ಕವಾಗಿದ್ದ ಮಹೀಂ ಕಾಸ್‌ವೇನಲ್ಲಿ ಪ್ರಯಾಣಕ್ಕೆ 50-80 ನಿಮಿಷ ವ್ಯರ್ಥವಾಗುತ್ತಿದೆ.ಭಾನುವಾರದವರೆಗೆ ಉಚಿತ ಪ್ರಯಾಣದ ಮೋಜನ್ನು ಸವಿಯಲು ಎಲ್ಲರಿಗೂ ತಣಿಯದ ಕುತೂಹಲ. ಈ ಉತ್ಸಾಹದಿಂದ ಸೇತುವೆಯಲ್ಲಿ ಟ್ರಾಫಿಕ್ ಜಾಮ್. ನಮ್ಮ ನಿರೀಕ್ಷೆ ಮೀರಿ 10 ಗಂಟೆಯೊಳಗೆ ಅಂದಾಜು 10,000ಕ್ಕಿಂತ ಹೆಚ್ಚು ವಾಹನಗಳು ಸೇತುವೆಯಲ್ಲಿ ಹಾದುಹೋಗಿದ್ದು, ಹವಾಮಾನ ಹಿತಕರವಾಗಿದ್ದರಿಂದ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇತ್ತೆಂದು ಅಧಿಕಾರಿ ತಿಳಿಸಿದ್ದಾರೆ.
ಸಮುದ್ರದ ಮೇಲೆ ಪ್ರಯಾಣಿಸುವ ಅನುಭವ ಪಡೆಯಲು ಬಾಂದ್ರಾ ಮತ್ತು ವೊರ್ಲಿಯ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಅಪಾರ ವಾಹನಸಂದಣಿ ಉದ್ಭವಿಸಿತು. ಸೇತುವೆಯಲ್ಲಿ 100 ಕಿಮೀ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದ್ದರೂ ಸದ್ಯಕ್ಕೆ 50 ಕಿಮೀ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಆದಾಗ್ಯೂ, ವಾಹನಸಂದಣಿಯಿಂದ ಆರಂಭದ ದಿನದಲ್ಲಿ ಗಂಟೆಗೆ 20 ಕಿಮೀ ವೇಗದಲ್ಲಿ ವಾಹನಗಳು ಸಂಚರಿಸಿದವು. |