ದೇಶದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಇದರ ಅರ್ಥ ಶೀಘ್ರವೇ ಈ ದಾಳಿ ನಡೆಯಲಿದೆ ಎಂದಲ್ಲ ಎಂದು ಗೃಹ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.' ಪಶ್ಚಿಮ ಕರಾವಳಿಯಲ್ಲಿ ಉಗ್ರರ ದಾಳಿ ನಡೆಯಲಿದೆ ಎಂಬುದಾಗಿ ಗುಪ್ತಚರ ಇಲಾಖೆಯ ಮುನ್ಸೂಚನೆಯಾಗಿದ್ದು, ಆ ನಿಟ್ಟಿನಲ್ಲಿ ನಾವು ಈ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಕೂಡಲೇ ಮಾಹಿತಿಯನ್ನು ರವಾನಿಸಲಾಗಿದೆ' ಎಂದು ಅವರು ಹೇಳಿದರು.ಅವರು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಬುಧವಾರ ಎನ್‌ಎಸ್‌ಜಿ ಘಟಕಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ, ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಸಂಭಾವ್ಯ ದಾಳಿ ಕುರಿತಂತೆ ಗುಪ್ತಚರ ಇಲಾಖೆಯಿಂದ ಸಂದೇಶ ದೊರೆತಿದೆ. ಆ ನಿಟ್ಟಿನಲ್ಲಿ ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ ತಿಳಿಸಿದರು.ಅಲ್ಲದೇ ತಾರಾಪುರ ಅಣು ವಿದ್ಯುತ್ ಸ್ಥಾವರ ಮತ್ತು ಬಾಬಾ ಅಣು ಸಂಶೋಧನಾ ಕೇಂದ್ರ ಕೂಡ ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದು, ಉಳಿದಂತೆ ಮಹಾರಾಷ್ಟ್ರ ಮತ್ತು ಪ್ರವಾಸಿತಾಣವಾದ ಗೋವಾ ಸಹ ಸೇರಿದೆ ಎಂದು ವಿವರಿಸಿದರು.ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ಮತ್ತು ಭದ್ರತೆಯ ದೃಷ್ಟಿಯಿಂದ ಕರಾವಳಿ ಪ್ರದೇಶದಲ್ಲಿ ಕರಾವಳಿ ಪೊಲೀಸ್, ನೇವಿ ಮತ್ತು ಕೋಸ್ಟ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ದಾಳಿ ಕುರಿತಂತೆ ಮಾಹಿತಿ ಲಭಿಸಿದ್ದು, ನಗರದಲ್ಲಿ ಮತ್ತೊಮ್ಮೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದ್ದು, ಇದು ರಸ್ತೆ, ವೈಮಾನಿಕ ಅಥವಾ ಸಮುದ್ರ ಮಾರ್ಗ ಸೇರಿದಂತೆ ಯಾವ ಕಡೆಯಿಂದಲೂ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಮುಂಬೈ ಪೊಲೀಸ್ ಕಮೀಷನರ್ ಡಿ.ಶಿವಾನಂದನ್ ತಿಳಿಸಿದ್ದಾರೆ. |