ಕಾಂಗ್ರೆಸ್ ಸಂಸತ್ ಸದಸ್ಯರೊಬ್ಬರು ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಘಟನೆಯನ್ನು ತೀವ್ರ ದುರದೃಷ್ಟಕರವೆಂದು ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಬಣ್ಣಿಸಿದ್ದಾರೆ. ಸಂಸತ್ ಸದಸ್ಯರೊಬ್ಬರಿಂದ ಇಂತಹ ಅತಿರೇಕದ ವರ್ತನೆ ನಿರೀಕ್ಷಿಸಿರಲಿಲ್ಲವೆಂದೂ ಸಂಸದರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕೆಂದೂ ಮೊಯ್ಲಿ ಹೇಳಿದ್ದಾರೆ.
ಆಂಧ್ರಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್ ಮ್ಯಾನೇಜರ್ ರವೀಂದ್ರ ರೆಡ್ಡಿ ಕಳೆದ 7 ತಿಂಗಳಿಂದ ಪರಿಶಿಷ್ಟ ಫಲಾನುಭವಿಗಳಿಗೆ ಸಾಲದ ಮೊತ್ತ ವಿತರಣೆ ಮಾಡಿಲ್ಲವೆಂದು ಆರೋಪಿಸಿ ನಾಗರಕರ್ನೂಲ್ ಕಾಂಗ್ರೆಸ್ ಸಂಸದ ಎಂ.ಜಗನ್ನಾಥ್ ಅವರು ರವೀಂದ್ರ ರೆಡ್ಡಿ ಕೆನ್ನೆಗೆ ಹೊಡೆದು ವಿವಾದಕ್ಕೆ ಗುರಿಯಾಗಿದ್ದಾರೆ.'ಯಾವುದೇ ಪ್ರಚೋದನೆಯಿದ್ದರೂ, ಯಾರೇ ಆಗಿರಲಿ ಸಂಯಮದಿಂದ ವರ್ತಿಸಬೇಕು.
ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸಾಧ್ಯವಿಲ್ಲವೆಂದು' ಮೊಯ್ಲಿ ಹೇಳಿದ್ದಾರೆ.ಏತನ್ಮಧ್ಯೆ, ತಾವು ದಲಿತರಾದ್ದರಿಂದ ಬ್ಯಾಂಕ್ ಮ್ಯಾನೇಜರ್ ನಿಂದಿಸಿ ಧೈರ್ಯವಿದ್ದರೆ ಬ್ಯಾಂಕಿಗೆ ಬರುವಂತೆ ಸವಾಲು ಹಾಕಿದರೆಂದು ಜಗನ್ನಾಥ್ ಆರೋಪಿಸಿದ್ದಾರೆ.ಮಂಡಲ್ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಸಭೆಯಲ್ಲಿ ತಾವು ಮ್ಯಾನೇಜರ್‌ಗೆ ಕರೆ ಮಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡದಿರುವುದಕ್ಕೆ ಕಾರಣ ಕೇಳಿದಾಗ ಮ್ಯಾನೇಜರ್ ಅನುಚಿತ ಉತ್ತರ ನೀಡಿದರೆಂದು ಅವರು ತಿಳಿಸಿದ್ದಾರೆ.
ಅವರ ಉತ್ತರದಿಂದ ಅಸಮಾಧಾನಗೊಂಡು, ಜಗನ್ನಾಥ್ ಬ್ಯಾಂಕ್‌ಗೆ ತೆರಳಿದಾಗ ಅಲ್ಲಿ ವಾದವಿವಾದ ಉಂಟಾಗಿ ರೆಡ್ಡಿಗೆ ಜಗನ್ನಾಥ್ ಕಪಾಳಮೋಕ್ಷ ಮಾಡಿದರೆಂದು ತಿಳಿದುಬಂದಿದೆ. ಸುದ್ದಿ ಚಾನೆಲ್‌ವೊಂದರ ವಿಡಿಯೊ ಪ್ರಸಾರದಲ್ಲಿ ಜಗನ್ನಾಥ್ ಬ್ಯಾಂಕ್ ಮ್ಯಾನೇಜರ್‌ಗೆ ಒಂದಕ್ಕಿಂತ ಹೆಚ್ಚು ಬಾರಿ ಕೆನ್ನೆಗೆ ಬಾರಿಸಿದ್ದನ್ನು ತೋರಿಸಿದೆ. |