ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ವಯಸ್ಕರು ನಡೆಸುವ ಸಲಿಂಗಕಾಮ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ಗುರುವಾರ ಐತಿಹಾಸಿಕ ತೀರ್ಪನ್ನು ನೀಡುವ ಮೂಲಕ, ಸಲಿಂಗಕಾಮ ಕಾನೂನುಬದ್ದ ಎಂದು ಹೇಳಿದೆ.
ಸಮಾನ ಮನಸ್ಕರು ನಡೆಸುವ ಸಲಿಂಗಕಾಮ ಚಟುವಟಿಕೆಯನ್ನು ಅಪರಾಧ ಎಂದು ಪರಿಗಣಿಸಬಾರದು ಎಂದು ಕೋರಿ ಸಲಿಂಗಕಾಮ ಹಕ್ಕು ಕಾರ್ಯಕರ್ತರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನ್ಯಾಯಪೀಠ ಇಂದು ಮಹತ್ವದ ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್ ಹೊರಭಾಗದಲ್ಲಿ ನೆರೆದಿದ್ದ ಸಲಿಂಗಕಾಮ ಕಾರ್ಯಕರ್ತರು ತೀರ್ಪು ತಮ್ಮ ಪರ ಹೊರಬೀಳುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ಇದು ಲೈಂಗಿಕ ಅಲ್ಪಸಂಖ್ಯಾತರಿಗೆ ದೊರೆತ ಐತಿಹಾಸಿಕ ಜಯ ಎಂದ ಸಲಿಂಗಕಾಮ ಸಂಘಟನೆ ತಿಳಿಸಿದೆ.
ಮುಖ್ಯನ್ಯಾಯಮೂರ್ತಿ ಅಜಿತ್ ಪ್ರಕಾಶ್ ಷಾ ನೇತೃತ್ವದ ಪೀಠವು ಈ ಪ್ರಕರಣದ ತೀರ್ಪನ್ನು ಕಳೆದ ವರ್ಷ ನವೆಂಬರ್ 7ರಂದು ಕಾದಿರಿಸಿತ್ತು. ಸಲಿಂಗಕಾಮ ಚಟುವಟಿಕೆ ಅಪರಾಧ ಎಂದು ಹೇಳಿರುವ 19ನೇ ಶತಮಾನದ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ನ್ಯಾಯಾಲಯವೊಂದು ನೀಡುವ ಪ್ರಥಮ ತೀರ್ಪು ಇದಾಗಿದೆ. 1980ರಿಂದ ಈಚೆಗೆ ಬ್ರಿಟನ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಸಲಿಂಗಕಾಮ ಚಟುವಟಿಕೆ ಅಪರಾಧ ಎಂಬ ಕಾಯ್ದೆಯನ್ನು ರದ್ದುಪಡಿಸಿವೆ.
ಭಾರತೀಯ ದಂಡ ಸಂಹಿತೆಯ 377ನೇ ಕಲಂ ಪ್ರಕಾರ, ಅನೈಸರ್ಗಿಕವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ವ್ಯಕ್ತಿಗೆ ಜೀವಾವಧಿ ಅಥವಾ 10ವರ್ಷಕ್ಕೂ ಹೆಚ್ಚು ಅವಧಿಯ ಶಿಕ್ಷೆಯನ್ನು ವಿಧಿಸಬಹುದು, ಜತೆಗೆ ದಂಡವನ್ನೂ ಕೂಡ ವಿಧಿಸಬಹುದಾಗಿತ್ತು.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯದ ಪ್ರಮಾಣಪತ್ರ ಅರ್ಜಿದಾರರನ್ನು ಬೆಂಬಲಿಸಿದರೆ, ಗೃಹಸಚಿವಾಲಯವು ಇಂತಹ ಕೃತ್ಯವು ಅನೈತಿಕವಾದ ಕಾರಣ ಭಾರತದಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಇಸ್ಲಾಂನ ದಿಯೋಬಂದ್ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. |