ಬಿಜೆಪಿಯಲ್ಲಿನ ಭಿನ್ನಮತ ಬಹಿರಂಗವಾಗುತ್ತಿರುವ ಬೆನ್ನಲ್ಲೇ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹಿರಿಯ ಸಂಸದ ಶತ್ರುಘ್ನ ಸಿನ್ನಾ ಈಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗುವ ಸಂಗತಿಗಳನ್ನು ಕೆಲ ಮುಖಂಡರು ಬಹಿರಂಗಪಡಿಸಿರುವುದಕ್ಕೆ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದಿಂದ ಕೆಲವು ಮುಖಂಡರ ಕನಸುಗಳು ನುಚ್ಚುನೂರಾಗಿದ್ದು ಆ ನಾಯಕರೇ ಪಕ್ಷದ ವೇದಿಕೆಯಲ್ಲಿ ಚರ್ಚೆಯಾದ ವಿಚಾರಗಳನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಿಂಬಿಸುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಎಲ್.ಕೆ.ಆಡ್ವಾಣಿ ಅವರ ನಂತರ ಯಾರು ಆ ಸ್ಥಾನ ಏರುತ್ತಾರೆ ಎಂಬ ಪ್ರಶ್ನೆಗೆ, 'ನಾನು ಸೇರಿದಂತೆ ಯಾರಾದರೂ ಆಗಬಹುದು. ಆದರೆ ಆಡ್ವಾಣಿ ಅವರು ಈಗ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತೊರೆಯುವುದಿಲ್ಲ'. ಪಕ್ಷದ ಎಲ್ಲ ಕಾರ್ಯಕರ್ತರು ಆಡ್ವಾಣಿ ಅವರನ್ನು ಒಪ್ಪಿಕೊಂಡಿದ್ದಾರೆ. ಅವರೇ ಪಕ್ಷವನ್ನು ಮುನ್ನೆಡೆಸುತ್ತಾರೆ ಎಂದರು.
ಹಿರಿಯ ನಾಯಕರಾದ ಯಶವಂತ್ ಸಿನ್ನಾ, ಅರುಣ್ ಶೌರಿ, ಜಸ್ವಂತ್ ಸಿಂಗ್ ಅವರು ಪಕ್ಷದ ವೇದಿಕೆಯಲ್ಲಿ ಎತ್ತಿದ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು. |