ಕ್ರೈಸ್ತ ಜನ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ ಎಂದು ಹೇಳಿಕೊಂಡಿರುವ ಕೇರಳದ ಕೆಥೋಲಿಕ್ ಚರ್ಚ್, ಸಂತಾನಹರಣ ಶಸ್ತ್ರಕ್ರಿಯೆ ಮಾಡಿಸಿಕೊಂಡ ಮಹಿಳೆಯರು ಮರಳಿ ಗರ್ಭಧಾರಣೆಗೆ ಅವಕಾಶ ಮಾಡಿಕೊಡುವ 'ರಿವರ್ಸ್ ಶಸ್ತ್ರಕ್ರಿಯೆ'ಗೆ ಮತ್ತು ಸಂತಾನಹೀನ ದಂಪತಿಗೆ ಔಷಧೀಯ ಬೆಂಬಲ ನೀಡುವ ಕ್ರಮದ ಬಗ್ಗೆ ಯೋಚಿಸುತ್ತಿದೆ.
ಆರ್ಥಿಕವಾಗಿ ಸಶಕ್ತವಾಗಿರುವ ಕುಟುಂಬಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಚರ್ಚ್‌ನ ಇಂಗಿತ ಎಂದು ಕೇರಳ ಕೆಥೋಲಿಕ್ ಬಿಷಪ್ಸ್ ಮಂಡಳಿ (ಕೆಸಿಬಿಸಿ) ಆಯೋಗದ ಕಾರ್ಯದರ್ಶಿ ಫಾದರ್ ಜೋಸ್ ಕೊಟ್ಟಾಯಿಲ್ ಹೇಳಿದ್ದಾರೆ. ಟ್ಯುಬೆಕ್ಟಮಿ ಮಾಡಿಸಿಕೊಂಡ ಮಹಿಳೆಯರ ಶಸ್ತ್ರಕ್ರಿಯೆಯನ್ನು ರದ್ದುಪಡಿಸಲಿಚ್ಛಿಸುವ ಮಹಿಳೆಯರಿಗೆ ಚರ್ಚ್ ಬೆಂಬಲ ನೀಡಲಿದೆ. ಇದಕ್ಕಾಗಿ ಚರ್ಚ್ ನಡೆಸುತ್ತಿರುವ ಆಸ್ಪತ್ರೆಗಳಲ್ಲಿ ಅಗ್ಗ ದರದ ಪ್ಯಾಕೇಜ್‌ಗಳನ್ನು ಒದಗಿಸಲಿದೆ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ದೊಡ್ಡ ಕುಟುಂಬಗಳನ್ನು ಚರ್ಚ್ ಪ್ರೋತ್ಸಾಹಿಸಲಿದೆ ಎಂದು ಕಳೆದ ವರ್ಷವೇ ಕೆಸಿಬಿಸಿ ಘೋಷಿಸಿತ್ತು ಎಂದ ಫಾದರ್ ಕೊಟ್ಟಾಯಿಲ್, ನಾಲ್ಕನೇ ಮಗುವಿಗೆ ಶೈಕ್ಷಣಿಕ ಭತ್ಯೆ ನೀಡುವ ಸಾಧ್ಯತೆಗಳನ್ನು ಕೆಥೋಲಿಕ್ ಡಯೊಸೀಸ್ ಪರಿಶೀಲಿಸಬೇಕು ಎಂಬ ಸಲಹೆ ನೀಡಿತ್ತು.
ಡಯೊಸೀಸ್‌ಗಳ ಪ್ರಚಾರಾಂದೋಲನದ ಪರಿಣಾಮವಾಗಿ ಹೆಚ್ಚಿನ ದಂಪತಿಗಳು ಸಂತಾನಹರಣ ಶಸ್ತ್ರಕ್ರಿಯೆಯ ರದ್ದತಿಗೆ ಮುಂದೆ ಬಂದಿದ್ದರು. ಸದ್ಯಕ್ಕೆ ಈ ರಿವರ್ಸ್ ಶಸ್ತ್ರಕ್ರಿಯೆಗೆ ಆಸ್ಪತ್ರೆಗಳು ತಲಾ 40 ಸಾವಿರ ರೂ.ನಷ್ಟು ಶುಲ್ಕ ವಿಧಿಸುತ್ತವೆ. ಚರ್ಚ್‌ಗಳಿಂದ ನಡೆಯುವ ಆಸ್ಪತ್ರೆಗಳಲ್ಲಿ ಈ ವೆಚ್ಚವು 10 ಸಾವಿರದ ಸಮೀಪ ಬರುವಂತೆ ನಾವು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆಯು ಶೇ.22ರಷ್ಟಿದೆ. ರಾಜ್ಯದ ಶೇ.60ರಷ್ಟು ಕ್ರಿಶ್ಚಿಯನ್ನರು ಕೆಥೋಲಿಕರು. ಕಳೆದ ಜನಗಣತಿ ಸಂದರ್ಭ ಕ್ರಿಶ್ಚಿಯನ್ ಜನಸಂಖ್ಯೆಯು ಶೇ.0.32ರಷ್ಟು ಕುಸಿದಿರುವುದನ್ನು ಎತ್ತಿ ತೋರಿಸಿತ್ತು. |