ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಗುರುವಾರ ಭೇಟಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆದರೆ ತಾವು ಕಾವೇರಿ ನೀರಿನ ವಿಷಯವಾಗಲಿ, ಹೊಗೇನಕಲ್ ಕುಡಿಯುವ ನೀರಿನ ಯೋಜನೆ ಕುರಿತಾಗಲಿ ಚರ್ಚಿಸಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ, ಚೆನ್ನೈಯಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ಲಭಿಸಿದ್ದು, ತಿರುವಳ್ಳುವರ್ ಪ್ರತಿಮೆ ಅನಾರವಣಗೊಳಿಸಲು ಶೀಘ್ರವೇ ಕರುಣಾನಿಧಿ ಬೆಂಗಳೂರಿಗೆ ಬರಲಿದ್ದಾರೆ ಎಂದೂ ತಿಳಿದುಬಂದಿದೆ.
ಕರುಣಾನಿಧಿಯ ಚೆನ್ನೈ ಗೋಪಾಲಪುರಂ ನಿವಾಸದಲ್ಲಿ ಅರ್ಧ ಗಂಟೆ ಕಾಲ ನಡೆದ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಆರೋಗ್ಯ ತಪಾಸಣೆಗಾಗಿ ತಾನು ಚೆನ್ನೈಗೆ ಬಂದಿರುವುದರಿಂದ, ಶಿಷ್ಟಾಚಾರದ ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾಗಿ ಹೇಳಿದರು.
ತನ್ನನ್ನು ಆಸ್ಪತ್ರೆಗೇ ಬಂದು ವಿಚಾರಿಸಿಕೊಂಡು ಹೋಗಲು ಕರುಣಾನಿಧಿ ಬಯಸಿದ್ದರು, ಆದರೆ ನಾನೇ ಆ ವಯೋವೃದ್ಧರ ನಿವಾಸಕ್ಕೆ ತೆರಳುವುದು ಸೂಕ್ತ ಎಂದು ಭಾವಿಸಿ ಭೇಟಿಯಾದೆ ಎಂದು ಹೇಳಿದರು.
ಕಾವೇರಿ ವಿಷಯದ ಕುರಿತಂತೆ ಬೇರೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಯಡಿಯೂರಪ್ಪ ನಿರಾಕರಿಸಿದರು.
1334 ಕೋಟಿ ರೂ.ಗಳಲ್ಲಿ ತಮಿಳುನಾಡಿನ ಹೊಗೇನಕಲ್ ಕುಡಿಯುವ ನೀರಿನ ಯೋಜನೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆ: ತ್ರಿಪದಿಗಳ ಮೂಲಕ ಖ್ಯಾತಿ ಪಡೆದಿದ್ದ ಕನ್ನಡದ ಕವಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸಲು ಚೆನ್ನೈಯ ಅಯನಾವರಂನಲ್ಲಿ ಭೂಮಿ ಗುರುತಿಸಲಾಗಿದೆ, ತಮಿಳುನಾಡು ಸರಕಾರವು ಇದಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ ಎಂದವರು ನುಡಿದರು.
ಅದೇ ರೀತಿ, ಸರ್ವಜ್ಞನ ಮಾದರಿಯಲ್ಲಿ ತಮಿಳುನಾಡಿನಲ್ಲಿಯೂ ಪ್ರಸಿದ್ಧವಾಗಿರುವ ಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿಗೆ ಬರಲಿದ್ದಾರೆ. ತಮಿಳುನಾಡು ವಿಧಾನಸಭೆ ಅಧಿವೇಶನ ಮುಕ್ತಾಯವಾದ ಬಳಿಕ ಈ ಕುರಿತ ದಿನಾಂಕ ನಿರ್ಧರಿಸಲಾಗುತ್ತದೆ ಎಂದರು.
ಯಡಿಯೂರಪ್ಪ ಆ ಬಳಿಕ ಕರುಣಾನಿಧಿ ನಿವಾಸದ ಹೊರಗಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರೊಂದಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಗಣೇಶನ್ ಜತೆಗಿದ್ದರು. |