ವಾಣಿಜ್ಯ ನಗರಿಯ ನೂತನ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆ ಮಾರ್ಗಕ್ಕೆ ರಾಜೀವ್ ಗಾಂಧಿ ಹೆಸರನ್ನು ಇಡಲು ಸೂಚಿಸಿರುವ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರ ವಿರುದ್ಧ ಶಿವಸೇನಾ ವರಿಷ್ಠ ಬಾಳ್ ಠಾಕ್ರೆ ಗುರುವಾರ ಕಿಡಿಕಾರಿದ್ದು, ಇದು ಬಹುಶ ಕಾಂಗ್ರೆಸ್‌ಗೆ ಮರಳಿ ಬರುವ ಯತ್ನ ಇದಾಗಿದೆ ಎಂದು ಟೀಕಿಸಿದ್ದಾರೆ.ಚುನಾವಣೆಯಲ್ಲಿ ಅವಮಾನಕರ ರೀತಿಯಲ್ಲಿ ಎನ್‌ಸಿಪಿ ಸೋಲನ್ನನುಭವಿಸಿದ್ದರೂ ಕೂಡ, ಶರದ್ ಪವಾರ್ ಮತ್ತು ತಮ್ಮ ಶ್ರೀಮಂತ ಏಜೆಂಟ್ ಆಗಿರುವ ಪ್ರಫುಲ್ ಪಟೇಲ್ ಕೇಂದ್ರ ಸಚಿವ ಸಂಪುಟದಲ್ಲಿ ಮೊದಲಿನ ಖಾತೆಯನ್ನೂ ಮರಳಿ ಪಡೆದಿದ್ದಾರೆ. ಆ ನಿಟ್ಟಿನಲ್ಲಿ ಋಣಸಂದಾಯ ಎಂಬಂತೆ ಬಹುಕೋಟಿ ವೆಚ್ಚದ ಸಮುದ್ರ ಮಾರ್ಗಕ್ಕೆ ರಾಜೀವ್ ಗಾಂಧಿ ಹೆಸರನ್ನಿಡಲು ಪವಾರ್ ಸೂಚಿಸಿದ್ದಾರೆ ಎಂದು ಠಾಕ್ರೆ ಶಿವಸೇನಾದ ಮುಖವಾಣಿಯಾದ ಸಾಮ್ನಾದ ಸಂಪಾದಕೀಯದಲ್ಲಿ ಲೇವಡಿ ಮಾಡಿದ್ದಾರೆ.ಸೇತುವೆಗೆ ರಾಜೀವ್ ಗಾಂಧಿ ಹೆಸರನ್ನಿಡಲು ಸೂಚಿಸುವ ಮೂಲಕ ಪವಾರ್ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಯನ್ನು ಓಲೈಸಿಕೊಂಡು, ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ಹುನ್ನಾರ ಎಂದು ಠಾಕ್ರೆ ಆರೋಪಿಸಿದ್ದಾರೆ.ನೆಹರೂ ಮತ್ತು ಗಾಂಧಿ ಕುಟಂಬದ ವಂಶರಾಜಕಾರಣಕ್ಕೆ ಇಡೀ ದೇಶವೇ ಅಚ್ಚರಿಪಡುತ್ತಿದೆ. ಈಗಾಗಲೇ ಸಾವಿರಾರು ಸಂಸ್ಥೆಗಳು ಗಾಂಧಿ ಕುಟುಂಬದ ಹೆಸರನ್ನೇ ಅಲಂಕರಿಸಿವೆ. ರಾಜೀವ್ ಗಾಂಧಿ ಮುಂಬೈಯಲ್ಲೇ ಜನಿಸಿದ್ದು, ಸೇತುವೆಗೆ ಅವರ ಹೆಸರನ್ನಿಡುವುದೇ ಸೂಕ್ತವಾದುದು ಎಂದಿರುವ ಪವಾರ್, ಮುಂಬೈಯಲ್ಲಿ ಪ್ರತಿನಿತ್ಯ ಸಾವಿರಾರು ಬಾಂಗ್ಲಾದೇಶಿ ಮಕ್ಕಳು ಜನಿಸುತ್ತವೆ. ಹಾಗಾದರೆ ಪವಾರ್ ಅವರು ತಮ್ಮ ಎಸ್ಟೇಟ್‌ಗೆ ಅವರ ಹೆಸರನ್ನು ಇಡುತ್ತಾರೆಯೇ ? ಅದೇ ರೀತಿ ಪವಾರ್ ಅವರ ಕಾಟೆವಾಡಿ ಗ್ರಾಮ ಅಥವಾ ಬಾರಾಮತಿ ಗ್ರಾಮಕ್ಕೆ ರಾಜೀವ್ ಗಾಂಧಿ ಅವರ ಹೆಸರನ್ನು ಇಡುತ್ತಾರೆಯೇ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಿದ್ದಾರೆ. |