ದೆಹಲಿ ಹೈಕೋರ್ಟ್ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿರುವ ಕ್ರಮಕ್ಕೆ ದೇಶದೆಲ್ಲೆಡೆ ಸಲಿಂಗಕಾಮಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರೆ, ಧಾರ್ಮಿಕ ನಾಯಕರು ಮಾತ್ರ ಕೋರ್ಟ್ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ. ವಯಸ್ಕರಲ್ಲಿ ಸಲಿಂಗಕಾಮಕ್ಕೆ ಮಾನ್ಯತೆ ನೀಡಿದ ಕ್ರಮ ಸಂಪೂರ್ಣವಾಗಿ ತಪ್ಪು. ಇಂತಹ ಕಾನೂನನ್ನು ತಾವು ಒಪ್ಪುವುದಿಲ್ಲವೆಂದು ಜುಮ್ಮಾ ಮಸೀದಿಯ ಇಮಾಮ್ ಅಹ್ಮದ್ ಬುಖಾರಿ ತಿಳಿಸಿದ್ದಾರೆ.
ಸಲಿಂಗಕಾಮವನ್ನು ಅಪರಾಧವೆನ್ನುವ ಭಾರತೀಯ ದಂಡಸಂಹಿತೆಯ 377 ಕಲಂನ್ನು ತಿದ್ದುಪಡಿ ಮಾಡುವ ಸರ್ಕಾರದ ಯತ್ನವನ್ನು ಅವರು ಟೀಕಿಸಿದರು. ಸರ್ಕಾರ 377ನೇ ಕಲಂ ರದ್ದಿಗೆ ಯತ್ನಿಸಿದರೆ ತಾವು ತೀವ್ರವಾಗಿ ವಿರೋಧಿಸುವುದಾಗಿ ಅವರು ಹೇಳಿದ್ದಾರೆ. ಸಲಿಂಗಕಾಮವನ್ನು ಯಾವುದೇ ಧರ್ಮ ಅವಕಾಶ ನೀಡುವುದಿಲ್ಲವೆಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ಸದಸ್ಯ ಮೌಲಾನಾ ಖಲೀದ್ ರಷೀದ್ ಫಿರಂಗಿ ಮಾಹ್ಲಿ ತಿಳಿಸಿದ್ದಾರೆ.
ಇದು ಎಲ್ಲ ಧರ್ಮಗಳಿಗೆ ವಿರುದ್ಧವಾಗಿದೆ. ಭಾರತದ ಸಾಮಾಜಿಕ ಸಂಸ್ಕೃತಿಗೆ ವಿರುದ್ಧವಾಗಿದೆ. ಇದೊಂದು ಅಸಹಜ ಚಟವಾಗಿದ್ದು, ಕ್ರಿಮಿನಲ್ ಕೃತ್ಯವೆಂದು ಅವರು ಹೇಳಿದ್ದಾರೆ. ಆದಾಗ್ಯೂ, ಚರ್ಚ್‌ಗಳು ಸಲಿಂಗಸಂಬಂಧವನ್ನು ನ್ಯಾಯಬದ್ಧ ಮತ್ತು ನೈತಿಕ ಹಕ್ಕೆಂದು ಅನುಮೋದಿಸಿಲ್ಲವೆಂದು ಅವರು ಹೇಳಿದ್ದಾರೆ. ಇದು ನಿಸರ್ಗ ಸಹಜ ಕ್ರಿಯೆಗೆ ವಿರೋಧವಾಗಿದೆ. ಇಂತಹ ಆಚರಣೆಯು ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕತೆಗೆ ಮತ್ತು ಎಚ್ಐವಿ/ಏಡ್ಸ್‌ಗೆ ಅವಕಾಶ ಕಲ್ಪಿಸುತ್ತದೆಂದು ನುಡಿದಿದ್ದಾರೆ. |