ನ್ಯಾಯಾಧೀಶರ ಆಸ್ತಿಪಾಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಅದರಿಂದ ಕಕ್ಷಿದಾರರಿಗೆ ತಪ್ಪು ಸಂದೇಶ ಕಳಿಸುತ್ತದೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.
ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ತಮ್ಮ ಆಸ್ತಿಪಾಸ್ತಿ ಘೋಷಣೆ ಮಾಡುತ್ತಾರೆ. ಅವರ ಸ್ಥೂಲ ವಿವರಗಳು ರಿಜಿಸ್ಟ್ರಾರ್ ಬಳಿ ಇರುತ್ತವೆ. ಆದ್ದರಿಂದ ಸಾರ್ವಜನಿಕವಾಗಿ ಆಸ್ತಿಬಹಿರಂಗ ಮಾಡುವುದರಿಂದ ಕಕ್ಷಿದಾರರಿಗೆ ತಪ್ಪುಸಂದೇಶ ಕಳಿಸುತ್ತದೆಂದು ನ್ಯಾಯಮೂರ್ತಿ ಬಾಲಕೃಷ್ಣನ್ ಸುದ್ದಿಚಾನೆಲ್‌ಗೆ ತಿಳಿಸಿದರು. ನ್ಯಾಯಾಧೀಶರು ಆಸ್ತಿಪಾಸ್ತಿ ಬಹಿರಂಗ ಮಾಡಬೇಕೆಂದು ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಕರೆನೀಡಿದ್ದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿ ಘೋಷಣೆ ಕಡ್ಡಾಯ ಮಾಡುವ ಮಸೂದೆಯನ್ನು ಶೀಘ್ರದಲ್ಲೇ ಸರ್ಕಾರ ತರಲಿದೆಯೆಂದು ಸಚಿವರು ಕಳೆದ ವಾರ ತಿಳಿಸಿದ್ದರು.ಯಾವುದೇ ಸಾರ್ವಜನಿಕ ಪ್ರಾಧಿಕಾರ ಸಮಾಜಕ್ಕೆ ಉತ್ತರದಾಯಿ ಆಗಿರುವುದರಿಂದ ನ್ಯಾಯಾಧೀಶರು ತಮ್ಮ ಆಸ್ತಿ ಬಹಿರಂಗ ಮಾಡುವ ವಿಷಯದ ಬಗ್ಗೆ ನ್ಯಾಯಾಂಗವು ಉತ್ತರಿಸಬೇಕೆಂದು ಮೊಯ್ಲಿ ಜೂ.4ರಂದು ತಿಳಿಸಿದ್ದರು. |