ಅತ್ಯಂತ ಸಂಕೀರ್ಣ ಕ್ರಿಮಿನಲ್ ಕೇಸುಗಳ ತನಿಖೆಗೆ ಹೊಣೆ ಹೊರುತ್ತಿದ್ದ ಮಹಾರಾಷ್ಟ್ರದ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಹೊಸ ಉದ್ಯೋಗ. ಅದೆಂದರೆ ಪ್ರೇಮ ವಿವಾಹದ ಕುರಿತು ತನಿಖೆ ನಡೆಸುವುದು. ವಿಶೇಷ ಏನೆಂದರೆ, ಸಿಐಡಿ ತನಿಖೆ ನಡೆಸಬೇಕಾಗಿರುವುದು ಹಿಂದೂ ಹುಡುಗಿಯರು ಮತ್ತು ಮುಸ್ಲಿಂ ಹುಡುಗರ ನಡುವಿನ ಪ್ರೇಮ ವಿವಾಹದ ಕುರಿತು!
ಮುಸ್ಲಿಂ ಹುಡುಗರು 'ಸಂಚು ರೂಪಿಸಿ' ಹಿಂದೂ ಹುಡುಗಿಯರನ್ನು ಪ್ರೇಮಪಾಶದಲ್ಲಿ ಕೆಡವಿ ಮದುವೆಯಾಗುತ್ತಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಸಿಐಡಿಗೆ ಆದೇಶಿಸಲಾಗಿದೆ. ಮಹಾರಾಷ್ಟ್ರ ಬಜೆಟ್ ಅಧಿವೇಶನದ ಕೊನೆಯ ದಿನ ಅಲ್ಲಿನ ಗೃಹ ಖಾತೆ ರಾಜ್ಯ (ಗ್ರಾಮೀಣ) ಸಚಿವ ನಿತಿನ್ ರಾವತ್ ಇದನ್ನು ಘೋಷಿಸಿದ್ದಾರೆ.
ಗಮನ ಸೆಳೆಯುವ ಸೂಚನೆಯೊಂದರ ಚರ್ಚೆ ಸಂದರ್ಭ, ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಂ ಯುವಕರು ಹಿಂದೂ ವಿದ್ಯಾರ್ಥಿನಿಯರನ್ನು ಬುಟ್ಟಿಗೆ ಹಾಕಿಕೊಂಡು ನಂತರ ಮದುವೆಯಾಗುತ್ತಿದ್ದಾರೆ ಎಂದು ಸದಸ್ಯರಾದ ಏಕನಾಥ ಖಾಡ್ಸೆ ಮತ್ತು ದೇವೇಂದ್ರ ಫಡ್ನವೀಸ್ ಹೇಳಿದರು. ಅವರ ಪ್ರಕಾರ, ಇದು ಸಮುದಾಯದ ಜನಸಂಖ್ಯೆ ಹೆಚ್ಚಿಸುವ "ಒಳಸಂಚು". ಕೆಲವು ಹಿಂದೂ ತರುಣಿಯರನ್ನು ಗಲ್ಫ್‌ಗೂ ಕಳುಹಿಸಲಾಗುತ್ತಿದೆ ಎಂದು ಖಾಡ್ಸೆ ಆರೋಪಿಸಿದರು.
ಚರ್ಚೆಗೆ ಉತ್ತರಿಸಿದ ರಾವತ್, ಇಂಥ ಘಟನೆಗಳು ನಡೆಯುತ್ತಿವೆ ಎಂಬುದನ್ನು ಒಪ್ಪಿಕೊಂಡರು. ಈ ಬಗ್ಗೆ ತನಿಖೆ ಆರಂಭಿಸುವುದಾಗಿ ಭರವಸೆ ನೀಡಿದರು. ಆದರೆ, ವಿಷಯ ತೀರಾ ಗಂಭೀರವಾಗಿರುವುದರಿಂದ ಇದರ ಬಗ್ಗೆ ಸಿಐಡಿ ತನಿಖೆ ನಡೆಸಬೇಕು ಎಂದು ಬಿಜೆಪಿ-ಶಿವಸೇನೆ ನೇತೃತ್ವದ ಪ್ರತಿಪಕ್ಷಗಳು ಪಟ್ಟು ಹಿಡಿದವು. ಆ ಬಳಿಕ ಕಾಂಗ್ರೆಸ್-ಎನ್‌ಸಿಪಿ ಸರಕಾರವು ಈ ಬೇಡಿಕೆಗೆ ಸಮ್ಮತಿಸಿತು.
ಆದರೆ, ರಾವತ್ ಘೋಷಣೆಯು ಅವರ ಸಂಪುಟ ಸಹೋದ್ಯೋಗಿಗಳಲ್ಲಿ ಎಲ್ಲರಿಗೂ ಇಷ್ಟವಾಗಿಲ್ಲ. ವಿಶೇಷವಾಗಿ ಮುಸ್ಲಿಂ ಸಮುದಾಯದ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಹಿರಿಯ ಎನ್‌ಸಿಪಿ ನಾಯಕ ಮತ್ತು ಕಾರ್ಮಿಕ ಸಚಿವ ನವಾಬ್ ಮಲಿಕ್ ಅವರು "ಇದರ ಹಿಂದೆ ಬಿಜೆಪಿಯ ರಾಜಕೀಯ ಹಿತಾಸಕ್ತಿ ಅಡಗಿದೆ" ಎಂದು ಅಸಮಾಧಾನ ಹೊರಗೆಡಹಿದ್ದಾರೆ.
ಕಾಂಗ್ರೆಸ್ ಮುಖಂಡ, ಗೃಹ ಖಾತೆ ರಾಜ್ಯ ಸಚಿವ (ನಗರ) ಆರಿಫ್ ನಸೀಮ್ ಖಾನ್ ಅವರಂತೂ, ನಿರ್ದಿಷ್ಟ ಸಮುದಾಯವೊಂದರ ಸದಸ್ಯರು ಬೇರೆ ಸಮುದಾಯದ ಹುಡುಗ/ಹುಡುಗಿಯನ್ನು ಮದುವೆಯಾಗುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಇಲ್ಲ ಎಂದಿದ್ದು, "ಅನ್ಯ ಸಮುದಾಯದ ಹುಡುಗ/ಹುಡುಗಿಯನ್ನು ಬಲವಂತವಾಗಿ ಮದುವೆ ಮಾಡಿದ ಪ್ರಕರಣಗಳು ಕಂಡುಬಂದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು" ಎಂದೂ ಅವರು ಸೇರಿಸಿದ್ದಾರೆ.
ಮಲಿಕ್ ಮತ್ತು ಖಾನ್ ಆರೋಪಗಳನ್ನು ನಿರಾಕರಿಸಿದ ಫಡ್ನವೀಸ್, ನಾವು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಮಾಡುವುದಿದ್ದರೆ, ಈ ಬಗ್ಗೆ ಮೋರ್ಚಾ ಅಥವಾ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದೆವು. ಆದರೆ, ಈ ಕುರಿತು ಸಿಐಡಿ ತನಿಖೆಯಾಗಲಿ ಎಂದು ನಾವು ಒತ್ತಾಯಿಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದ್ದಾರೆ. |