ಒರಿಸ್ಸಾದ ಕಂದಮಲ್ ಜಿಲ್ಲೆಯಲ್ಲಿ ಕಳೆದ ವರ್ಷ ಭುಗಿಲೆದ್ದ ಗಲಭೆಗಳಿಗೆ ಮತಾಂತರ ಮತ್ತು ಮರುಮತಾಂತರ ಪ್ರಮುಖ ಕಾರಣವಾಗಿದೆಯೆಂದು ಹಿಂಸಾಚಾರ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಾಂಗ ಸಮಿತಿ ತಿಳಿಸಿದೆ.
ಭೂವಿವಾದಗಳು, ಮತಾಂತರ, ಮರುಮತಾಂತರ ಮತ್ತು ನಕಲಿ ಪ್ರಮಾಣಪತ್ರಗಳಲ್ಲಿ ಹಿಂಸಾಚಾರದ ಮೂಲಗಳು ಆಳವಾಗಿ ಬೇರುಬಿಟ್ಟಿದೆ ಎಂದು ಏಕ ವ್ಯಕ್ತಿ ಸಮಿತಿಯ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಎಸ್.ಸಿ. ಮಲ್ಹೋತ್ರಾ 43 ಜೀವಗಳನ್ನು ಬಲಿತೆಗೆದುಕೊಂಡ ಕಂದಮಲ್ ಹಿಂಸಾಚಾರ ಕುರಿತು ಬಿಡುಗಡೆ ಮಾಡಿದ ತಮ್ಮ ಮಧ್ಯಂತರ ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಮತಾಂತರ, ಮರುಮತಾಂತರದ ಬಗ್ಗೆ ಅವರು ಹೆಚ್ಚಿನ ವಿವರಣೆ ನೀಡಲಿಲ್ಲ.
ಹಿಂದೂಗಳು ಮತ್ತು ಕ್ರೈಸ್ತರ ನಡುವೆ ಉದ್ಭವಿಸಿದ ಕೋಮುಗಲಭೆಯಲ್ಲಿ 38 ಕ್ರೈಸ್ತರು ಹತರಾಗಿದ್ದಕ್ಕೆ ಕಂದಮಲ್ ಸಾಕ್ಷಿಯಾಯಿತು. ಕಳೆದ ವರ್ಷ ವಿಎಚ್‌ಪಿ ನಾಯಕ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಮಾವೋವಾದಿ ನಕ್ಸಲೀಯರು ಅಮಾನುಷವಾಗಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಅನೇಕ ಚರ್ಚ್‌ಗಳು ಅಗ್ನಿಗಾಹುತಿಯಾದವು ಮತ್ತು ಸಾವಿರಾರು ಕ್ರೈಸ್ತರು ಮುಖ್ಯವಾಗಿ ಬುಡಕಟ್ಟು ಜನರು ಹಿಂದೂಗಳ ದಾಳಿಯಿಂದ ಗ್ರಾಮಗಳನ್ನು ತೊರೆದರು.
ಕ್ರೈಸ್ತರಾದ ಪಾನೊ ದಲಿತರು ಅಕ್ರಮ ಮಾರ್ಗಗಳ ಮೂಲಕ ನಮ್ಮ ನೆಲವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆಂದು ಹಿಂದೂ ಬುಡಕಟ್ಟು ಜನರು ಶಂಕಿಸಿದ್ದೇ ಗಲಭೆಗೆ ಮುಖ್ಯ ಕಾರಣವಾಗಿದೆ ಎಂದು ನ್ಯಾಯಮೂರ್ತಿ ಮಹೋಪಾತ್ರ ತಿಳಿಸಿದ್ದಾರೆ. ಕಂದಮಲ್ ಜನಸಂಖ್ಯೆಯಲ್ಲಿ ಶೇ.52ರಷ್ಟಿರುವ ಕಂದಾ ಬುಡಕಟ್ಟು ಜನರಲ್ಲಿ ನಕಲಿ ಪ್ರಮಾಣಪತ್ರಗಳ ಬಗ್ಗೆ ಅತೃಪ್ತಿ ಮೂಡಿದ್ದೇ ಇನ್ನೊಂದು ಮುಖ್ಯ ಅಂಶವೆಂದು ಹೇಳಲಾಗಿದೆ.
ಕಂದಾ ಬುಡಕಟ್ಟು ಜನರು ಅವಿದ್ಯಾವಂತರಾಗಿದ್ದು, ತಮಗೆ ಸೇರಬೇಕಾದ ಮೀಸಲಾತಿಯನ್ನು ಕ್ರೈಸ್ತರಾದ ಪಾನೊ ದಲಿತರು ಕಬಳಿಸುತ್ತಿದ್ದಾರೆಂಬ ಅತೃಪ್ತಿಯ ಭಾವನೆ ಹೊಂದಿದ್ದರೆಂದು ನ್ಯಾಯಮೂರ್ತಿ ಮಹೋಪಾತ್ರ 28 ಪುಟಗಳ ವರದಿಯಲ್ಲಿ ತಿಳಿಸಿದ್ದಾರೆ. |