ಉತ್ತರಪ್ರದೇಶದಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವ ಬದಲಿಗೆ ಅಭಿವೃದ್ಧಿ ಕೆಲಸಗಳಿಗೆ ಗಮನನೀಡುವುದು ಒಳ್ಳೆಯದೆಂದು ಸಲಹೆ ಮಾಡಿದ ಉತ್ತರಖಂಡದ ಪಕ್ಷದ ನಾಯಕರೊಬ್ಬರಿಗೆ ಸಿಕ್ಕಿದ ಬಹುಮಾನ ಪಕ್ಷದಿಂದ ಉಚ್ಚಾಟನೆ. ಉತ್ತರಖಂಡದ ನಾಯಕರು ಪಕ್ಷಕ್ಕೆ ಸೇರಿ ಕೇವಲ ಮೂರು ತಿಂಗಳು ಕಳೆಯುವಷ್ಟರಲ್ಲಿ ಅವರನ್ನು ಉಚ್ಚಾಟಿಸಲಾಗಿದೆ.
ಪಕ್ಷದ ಮೂಲಗಳ ಪ್ರಕಾರ, ಬಿಎಸ್‌ಪಿ ನಾಯಕ ಮತ್ತು ತೆಹ್ರಿ ಲೋಕಸಭೆ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿ ಮುನ್ನಾ ಸಿಂಗ್ ಚೌಹಾನ್ ಅವರು ಮಾಯಾವತಿಗೆ ಪತ್ರ ಬರೆದು ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿಲ್ಲಿಸಿ, ದಲಿತರ ಅಭಿವೃದ್ಧಿಗೆ ಹೆಚ್ಚು ಗಮನವಹಿಸುವಂತೆ ಸಲಹೆ ಮಾಡಿದ್ದರಿಂದ ಅವರನ್ನು ಉಚ್ಚಾಟಿಸಲಾಗಿದೆ ಎಂದು ಬಿಎಸ್‌ಪಿ ಅಧ್ಯಕ್ಷ ಮೇಘರಾಜ್ ಸಿಂಗ್ ತಿಳಿಸಿದ್ದಾರೆ.
ಚೌಹಾನ್ ಕಳೆದ ಒಂದು ತಿಂಗಳಿಂದ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ ಸಿಂಗ್, ಕಳೆದ ರಾತ್ರಿ ಅವರನ್ನು ಉಚ್ಚಾಟಿಸಿದ್ದಾಗಿ ನುಡಿದರು.ವಿಕಾಸನಗರದ ಮರುಚುನಾವಣೆ ಬೆನ್ನಹಿಂದೆಯೆ ಚೌಹಾನ್ ಉಚ್ಚಾಟನೆ ಸುದ್ದಿ ಹೊರಬಿದ್ದಿದೆ.
ಬಿಜೆಪಿಗೆ ಚೌಹಾನ್ ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನ ತೆರವಾಗಿತ್ತು. ಬಿಜೆಪಿ ಟಿಕೆಟ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಚೌಹಾನ್ ವಿಕಾಸನಗರ ವಿಧಾನಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಎಸ್‌ಪಿ ಸೇರಿದ್ದರು. ಬಳಿಕ ಬಿಎಸ್‌ಪಿ ಟಿಕೆಟ್ ಪಡೆದು ತೆಹ್ರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿಫಲರಾಗಿದ್ದರು. |