ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಹಾಗೂ ಸಿಪಿಐಎಂ ಹಿರಿಯ ಮುಖಂಡ ಪಿಣರಾಯ್ ವಿಜಯನ್ ನಡುವಿನ ಶೀತಲ ಸಮರ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಶನಿವಾರ ನವದೆಹಲಿಯಲ್ಲಿ ಪ್ರಕಾಶ್ ಕಾರಟ್ ನೇತೃತ್ವದಲ್ಲಿ ಪಾಲಿಟ್ ಬ್ಯುರೋ ಸಭೆ ನಡೆಯುತ್ತಿದ್ದು, ಕಾರಟ್ ನಿರ್ಧಾರ ಕೇರಳ ರಾಜ್ಯರಾಜಕಾರಣದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಸಿಪಿಐಎಂ ಹಿರಿಯ ಮುಖಂಡರ ಕಿತ್ತಾಟ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪವಾಗಿದ್ದು, ಕೇರಳ ಸಿಪಿಐಎಂ ರಾಜ್ಯ ಘಟಕದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಲ್ಯಾವೆಲಿನ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಪಿಣರಾಯ್ ವಿಜಯನ್ ಅವರನ್ನು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿ ಅಚ್ಯುತಾನಂದನ್ ಪಟ್ಟು ಹಿಡಿದಿದ್ದಾರೆ. ಅದರಂತೆಯೇ ಪಕ್ಷದ ಶಿಸ್ತು ಉಲ್ಲಂಘಿಸಿರುವ ಅಚ್ಯುತಾನಂದನ್‌ರನ್ನು ಸಿಎಂಗಾದಿಯಿಂದ ಕೆಳಗಿಳಿಸಬೇಕು ಎಂಬ ಹಠ ಪಿಣರಾಯ್ ಅವರದ್ದು.ಒಟ್ಟಾರೆಯಾಗಿ ಎಡಪಕ್ಷದ ಹಿರಿಯ ಮುಖಂಡರ ಕೆಸರೆರಚಾಟ ಪಕ್ಷದೊಳಗೆ ಭಿನ್ನಮತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಐಎಂ ವರಿಷ್ಠ ಪ್ರಕಾಶ್ ಕಾರಟ್ ನೇತೃತ್ವದಲ್ಲಿ ಇಂದು ಪಾಲಿಟ್ ಬ್ಯುರೋ ಸಭೆ ನಡೆಯುತ್ತಿದ್ದು, ಭಿನ್ನಮತ ಮತ್ತು ಬೇಡಿಕೆ ಕುರಿತು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. |