ಶೋಪಿಯಾನ್‌ನಲ್ಲಿ ಮೇ 29-30ರಂದು ಅತ್ಯಾಚಾರ ಮತ್ತು ಹತ್ಯೆಗೊಳಗಾಗಿದ್ದಾರೆಂದು ಆರೋಪಿಸಲಾದ ನಿಲೋಫರ್ ಮತ್ತು ಆಸ್ಯಾ ದೇಹಗಳನ್ನು ಹೊರತೆಗೆಯಲು ಜಮ್ಮುಕಾಶ್ಮೀರ ಹೈಕೋರ್ಟ್ ಆದೇಶಿಸಿದೆ. ಶೋಪಿಯಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೆಲವು ಕಠಿಣ ಆದೇಶಗಳನ್ನು ನೀಡಿದೆ.
ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾದ ಬಳಿಕ ಭದ್ರತಾ ಪಡೆಗಳೇ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ದುಷ್ಕೃತ್ಯವೆಸಗಿದ್ದಾರೆಂದು ಶಂಕೆಯಿಂದ ವ್ಯಾಪಕ ಪ್ರತಿಭಟನೆ ಭುಗಿಲೆದ್ದು, ಹಿಂಸಾಚಾರ ಸಂಭವಿಸಿತು.
ಅತ್ಯಾಚಾರ ಮತ್ತು ಹತ್ಯೆ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅನುಮತಿಯಿಲ್ಲದೇ ಸಿಆರ್‌ಪಿಎಫ್ ಮತ್ತು ಪೊಲೀಸರು ಸೇರಿದಂತೆ ಯಾರೊಬ್ಬರೂ ಶೋಪಿಯಾನ್ ಬಿಟ್ಟು ಹೊರಕ್ಕೆ ತೆರಳಬಾರದೆಂದು ಕೋರ್ಟ್ ಆದೇಶ ನೀಡಿದೆ.
ಮೃತದೇಹಗಳು ಪತ್ತೆಯಾದ ಸ್ಥಳದಿಂದ ಮಾಡಿದ ಮೊಬೈಲ್ ಕರೆಗಳ ವಿವರಣೆ ನೀಡುವುದಕ್ಕೆ ಪೂರ್ಣ ಸಹಕಾರ ನೀಡುವಂತೆ ಮೊಬೈಲ್ ಸೇವೆ ನಿರ್ವಾಹಕರಿಗೆ ಕೂಡ ಕೋರ್ಟ್ ಸೂಚಿಸಿದೆ.ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಶಾಹಿದಾ ಮಿರ್ ನೇಮಿಸಿದ ವೈದ್ಯರ ತಂಡವು ಹೊರತೆಗೆದ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಬೇಕೆಂದೂ ಕೋರ್ಟ್ ಆದೇಶ ನೀಡಿದೆ. |