ಅನುಕೂಲಕರ ತೀರ್ಪನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಒತ್ತಡ ಹೇರಿರುವ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎ.ರಾಜಾ, 'ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತ' ಎಂದು ತಿಳಿಸಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರ ಮೇಲೆ ತಾನು ಒತ್ತಡ ಹೇರಿದೆ ಎಂಬ ವಿಚಾರದಲ್ಲಿ ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.
ಅನುಕೂಲಕರ ತೀರ್ಪನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಒತ್ತಡ ಹೇರಿದ್ದು ಡಿಎಂಕೆಯ ಸಚಿವ ಎ.ರಾಜಾ ಎಂಬುದಾಗಿ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಗುರುವಾರ ಪತ್ರಿಕಾ ಹೇಳಿಕೆಯ ಮೂಲಕ ಆರೋಪಿಸಿದ್ದರು.
ಅನುಕೂಲಕರ ತೀರ್ಪನ್ನು ನೀಡುವಂತೆ ಕೇಂದ್ರ ಸಚಿವರೊಬ್ಬರು ತಮಗೆ ಒತ್ತಡ ಹೇರಿದ್ದಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ರಘಪತಿ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸುವ ಮೂಲಕ ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆದರೆ ನ್ಯಾಯಾಧೀಶರು ತಮ್ಮ ಮೇಲೆ ಒತ್ತಡ ಹೇರಿದ್ದ ಸಚಿವರ ಹೆಸರನ್ನು ಮಾತ್ರ ಬಹಿರಂಗಪಡಿಸದೆ ಇದ್ದ ಪರಿಣಾಮ ಪ್ರಕರಣ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.
ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಡಿಎಂಕೆಯ ಎ.ರಾಜಾ ಅವರು ಮಾಹಿತಿ ಮತ್ತು ಸಂಪರ್ಕ ಖಾತೆ ಸಚಿವರಾಗಿದ್ದಾರೆ. ನ್ಯಾಯಾಧೀಶರ ಮೇಲೆಯೇ ಒತ್ತಡ ಹೇರಲು ಪ್ರಯತ್ನಿಸಿದ್ದ ಸಚಿವ ರಾಜಾ ಅವರನ್ನು ಸಂಪುಟದಿಂದ ವಜಾಗೊಳಿಸುಂತೆ ಜಯಲಲಿತಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿ, ರಾಜಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದ್ದರು.
ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿಯಾದ ಅವರ ಪುತ್ರನ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಗಳನ್ನು ತೆರೆದ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಆರ್. ರಘುಪತಿ, ಕೇಂದ್ರ ಸಚಿವರೊಬ್ಬರು ಈ ಪ್ರಕರಣದ ಆರೋಪಿಗಳ ಪರವಾಗಿ ತೀರ್ಪು ನೀಡುವಂತೆ ತಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದರು. ಆದರೆ ಸಚಿವರ ಹೆಸರನ್ನು ಹೇಳಲು ಅವರು ನಿರಾಕರಿಸಿದ್ದರು. ತಮ್ಮ ಪುತ್ರ ಪರೀಕ್ಷೆ ಪಾಸು ಮಾಡುವುದಕ್ಕಾಗಿ ಅಧಿಕಾರಿಯೊಬ್ಬರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಡಾ. ಕೃಷ್ಣಮೂರ್ತಿ ಎಂಬವರಿಗೆ ಈ ಪ್ರಕರಣ ಸಂಬಂಧಿಸಿದ್ದು, ಸಿಬಿಐ ತನಿಖೆ ನಡೆಸುತ್ತಿದೆ. |