ಎಂಬಿಎ ಪದವೀಧರನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದ ಆರೋಪವನ್ನು ಡೆಹ್ರಾಡನ್ ಪೊಲೀಸರ ಮೇಲೆ ಹೊರಿಸಲಾಗಿದೆ. ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿಯಾದ ರಣಬೀರ್ ಸಿಂಗ್‌ನನ್ನು ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದಿರುವುದಾಗಿ ಅವರ ಕುಟುಂಬ ಆರೋಪಿಸಿದೆ.
ಸಿಂಗ್ ಅವರು ಹೊಸ ಹುದ್ದೆಗೆ ಸೇರಲು ಡೆಹ್ರಾಡನ್‌ಗೆ ಭೇಟಿ ನೀಡಿ ತಮ್ಮ ಇಬ್ಬರು ಸ್ನೇಹಿತರ ಜತೆ ಮೋಟರ್ ಸೈಕಲ್‌ನಲ್ಲಿ ತೆರಳುತ್ತಿದ್ದರು. ಡಲಾನ್‌ವಾಲ ಬಳಿ ಪೊಲೀಸರು ಮೂವರನ್ನು ಪೊಲೀಸರು ತಡೆದರು. ತಮ್ಮನ್ನು ನಿಲ್ಲಿಸಿದ ಪೇದೆ ಜತೆ ಮೂವರು ವಾದಕ್ಕಿಳಿದು ನಂತರ ಪೇದೆಯ ಪಿಸ್ತೂಲು ಕಸಿದುಕೊಂಡು ಪರಾರಿಯಾದರೆಂದು ಪೊಲೀಸರು ಆರೋಪಿಸಿದ್ದಾರೆ. ಬಳಿಕ ಅರಣ್ಯವೊಂದರ ಬಳಿ ಇನ್ನೊಂದು ಚೌಕಿಯಲ್ಲಿ ಪೊಲೀಸರು ಸಿಂಗ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಿಂಗ್ ತಮ್ಮತ್ತ ಗುಂಡು ಹಾರಿಸಿದ್ದರಿಂದ ತಾವು ಗುಂಡು ಹಾರಿಸಿ ಎನ್‌ಕೌಂಟರ್‌ನಲ್ಲಿ ಕೊಂದಿದ್ದಾಗಿ ಪೊಲೀಸರು ಹೇಳುತ್ತಿದ್ದಾರೆ.
ಚಾಕು ಕೂಡ ಸಿಂಗ್ ಚೀಲದಲ್ಲಿ ಪತ್ತೆಯಾಗಿದ್ದಾಗಿ ಡೆಹ್ರಾಡನ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಪೊಲೀಸರ ಆರೋಪಗಳನ್ನು ಸಿಂಗ್ ಕುಟುಂಬ ಸಾರಾಸಗಟಾಗಿ ಅಲ್ಲಗಳೆದಿದೆ. ಸಿಂಗ್‌ನನ್ನು ಹಾಡುಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ಅವರು ಆರೋಪಿಸಿದ್ದಾರೆ.
ಸಿಂಗ್ ತಂದೆ ರವೀಂದರ್ ತಮ್ಮ ಪುತ್ರನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆ ಇರಲಿಲ್ಲವೆಂದೂ, ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದನೆಂದೂ, ಪದಕಗಳನ್ನು ಗೆಲ್ಲುವುದಕ್ಕಾಗಿ ಪೊಲೀಸರು ನಕಲಿ ಎನ್‌ಕೌಂಟರ್ ಮೂಲಕ ತಮ್ಮ ಪುತ್ರನನ್ನು ಕೊಂದಿದ್ದಾರೆಂದು ಆರೋಪಿಸಿದ್ದಾರೆ. ತಾವು ದೂರು ನೀಡದಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆಂದೂ ತಿಳಿಸಿದ್ದಾರೆ. |