ಶನಿವಾರ ಸುರಿದ ಭಾರೀ ಮಳೆಯಿಂದಾಗಿ ವಿಮಾನ, ರೈಲುಗಳ ಪ್ರಯಾಣದಲ್ಲೂ ವ್ಯತ್ಯವುಂಟಾಗಿದ್ದು, ರಸ್ತೆಗಳು, ಸುರಂಗ ಮಾರ್ಗಗಳು ಜಲಾವೃತ್ತವಾದ ಕಾರಣ ಮುಂಬೈ ಜನಜೀವನ ಅಸ್ತವ್ಯಸ್ತಗೊಂಡಿದೆ. ಜತೆಗೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ವರದಿಗಳೂ ಬಂದಿವೆ.
2005ರ ಭಯಾನಕ ಚಿತ್ರಣವನ್ನು ಮರುಕಳಿಸುವ ಸೂಚನೆ ಮುಂಬೈಯಲ್ಲಿ ಕಂಡು ಬರುತ್ತಿದ್ದು ಎಲ್ಲೆಡೆ ಮಳೆ ನೀರು ನಿಂತು ಕೃತಕ ನೆರೆಯೇ ಸೃಷ್ಟಿಯಾಗಿದೆ. ಹಲವು ಕಡೆ ರೈಲುಗಳನ್ನು ನೆರೆಯ ಕಾರಣ ತಡೆ ಹಿಡಿಯಲಾಯಿತು. ವಾತಾವರಣ ಪೂರಕವಾಗಿಲ್ಲದ ಕಾರಣ ಕೆಲ ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ರಸ್ತೆಯಲ್ಲಿ ವಾಹನಗಳು ಮುಳುಗಡೆಯಾದ ದೃಶ್ಯಗಳು ಸಾಮಾನ್ಯವೆಂಬಂತೆ ಶನಿವಾರ ಕಂಡು ಬಂದಿದೆ.
ಗೋವಂಡಿಯಲ್ಲಿ ವಿದ್ಯುತ್ ಆಘಾತದಿಂದ 40ರ ಹರೆಯದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ, 10ರ ಬಾಲಕನೋರ್ವ ತೀವ್ರ ಗಾಯಗೊಂಡ ಘಟನೆಯೂ ವರದಿಯಾಗಿದೆ. ಮತ್ತೊಬ್ಬರ ಮೈ ಮೇಲೆ ಕಾಂದಿವಿಲಿಯಲ್ಲಿ ಮರ ಬಿದ್ದು ಮೃತರಾಗಿದ್ದಾರೆ.
ಭಾನುವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಗಳಿದ್ದು, ಸುರಕ್ಷಿತ ಜಾಗಗಳನ್ನು ಸೇರಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ. ಮಳೆ ಅಪಾಯಮಟ್ಟವನ್ನು ತಲುಪುವಂತಿದ್ದರೆ ಜನರ ರಕ್ಷಣೆಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್ ಚೌಹಾನ್ ತಿಳಿಸಿದ್ದಾರೆ.
ಕೊಲಾಬದಲ್ಲಿ 102 ಎಂಎಂ, ಸಾಂತಾಕ್ರೂಸ್‌ನಲ್ಲಿ 202 ಎಂಎಂ ಮಳೆ ಬಂದ ವರದಿಯಾಗಿದೆ. ಒಟ್ಟಾರೆ ಮುಂಬೈ ನಗರದ ಮಳೆ 126.47 ಮಿ.ಮಿ. ಎಂದು ಮೂಲಗಳು ತಿಳಿಸಿವೆ.
ಮಳೆಯಿಂದಾಗಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಸಮುದ್ರ ಸೇತುವೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ನೆರೆ ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಪೊಲೀಸ್ ಮತ್ತು ನಾಗರಿಕ ಸಂಸ್ಥೆಗಳು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿವೆ ಎಂದೂ ಚೌಹಾನ್ ತಿಳಿಸಿದ್ದಾರೆ.
2005ರ ಜುಲೈ 27-28ರ ದಿಢೀರ್ ಮಳೆಯಿಂದಾಗಿ ನೆರೆ ಪರಿಸ್ಥಿತಿ ತಲೆದೋರಿ 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಸ್ಥಳೀಯ ಸರಕಾರವು ಹೆಚ್ಚಿನ ಮುಂಜಾಗ್ರತೆ ವಹಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
|