ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬಳಕೆಯಲ್ಲಿ ಅಕ್ರಮಗಳಿಗೆ ಅವಕಾಶವಾಗಬಹುದೆಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಭಾನುವಾರ ಶಂಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ಆಡ್ವಾಣಿ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗಳಲ್ಲಿ ಮತ್ತು ಈ ವರ್ಷಾಂತ್ಯದಲ್ಲಿ ಮೂರು ರಾಜ್ಯಗಳಿಗೆ ಚುನಾವಣೆಯಲ್ಲಿ ಮತಪತ್ರಗಳನ್ನು ಪುನಾರಂಭಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ಎಲೆಕ್ಟ್ರಾನಿಕ್ ಮತ ಯಂತ್ರಗಳು ತಪ್ಪಿಗೆ ಆಸ್ಪದವಿಲ್ಲವೆಂದು ಮತ್ತು ಅದರ ಅಸಮರ್ಪಕ ನಿರ್ವಹಣೆಯ ಎಲ್ಲ ಸಾಧ್ಯತೆಗಳ ಬಗ್ಗೆ ನಿಗಾವಹಿಸುವುದಾಗಿ ಚುನಾವಣೆ ಆಯೋಗ ಖಾತರಿ ಮಾಡುವ ತನಕ ನಾವು ಮತಚೀಟಿಗಳನ್ನು ಬಳಸಬೇಕೆಂದು ಆಡ್ವಾಣಿ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆ ಕುರಿತು ಮುಖ್ಯ ರಾಜಕೀಯ ಪಕ್ಷವೊಂದು ಅನುಮಾನ ವ್ಯಕ್ತಪಡಿಸಿದ್ದು ಇದೇ ಪ್ರಥಮ ಬಾರಿಯೆಂದು ಹೇಳಲಾಗಿದೆ.ಇವಿಎಂಗಳನ್ನು ರದ್ದು ಮಾಡುವುದಕ್ಕೆ ಒತ್ತಾಯಿಸಿರುವ ಆಡ್ವಾಣಿ, ಅದಕ್ಕೆ ಅನೇಕ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಜರ್ಮನಿಯಲ್ಲಿ ಎಲೆಕ್ಟ್ರಾನಿಕ್ ಮತದಾನ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಅಮೆರಿಕದಲ್ಲಿ ಇವಿಎಂ ಮೂಲಕ ಮತದಾನಕ್ಕೆ ವ್ಯಾಪಕ ಮಾರ್ಗದರ್ಶಕಗಳನ್ನು ಹೇರಲಾಗಿದೆಯೆಂದು ನಿದರ್ಶನಗಳನ್ನು ನೀಡಿದರು.ಚುನಾವಣೆಯಲ್ಲಿ ಅಕ್ರಮ ಮತ್ತು ಅವ್ಯವಹಾರಗಳು ನಡೆದ ಬಗ್ಗೆ ಯಾರೂ ಪ್ರಶ್ನೆಯೆತ್ತಿಲ್ಲ. ಆದರೆ ಎಲೆಕ್ಟ್ರಾನಿಕ್ ಮತಯಂತ್ರಗಳ ಅಸಮರ್ಪಕ ನಿರ್ವಹಣೆಯನ್ನು ಕುರಿತು ನಿಗಾವಹಿಸಬೇಕೆಂದು ಅವರು ಹೇಳಿದರು. |