ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗಿದ್ದರಿಂದ ಪೆಟ್ರೋಲ್ ಉಳಿಸುವುದು ಹೇಗೆಂದು ಅನೇಕ ಮಂದಿ ದಾರಿ ಹುಡುಕುತ್ತಿರಬಹುದು. ಕೆಲವರು ಕಾರನ್ನು ಬಾಡಿಗೆಗೆ ಕೊಟ್ಟರೆ ಇನ್ನೂ ಕೆಲವರು ಸಾರ್ವಜನಿಕ ಸಾರಿಗೆ ಬಸ್ಸುಗಳ ಮೊರೆ ಹೋಗಿದ್ದಾರೆ. ಆದರೆ ಇಲ್ಲೊಬ್ಬರು ರಾಜಮಹಾರಾಜರ ಕಾಲದಲ್ಲಿ ದೂರಪ್ರಯಾಣಕ್ಕೆ ಬಳಕೆಯಾಗುತ್ತಿದ್ದ ಕುದುರೆಯನ್ನು ಕಚೇರಿಗೆ ಹೋಗಿ ಬರಲು ಆಯ್ಕೆಮಾಡಿದ್ದಾರೆ.
ಇಂಧನ ಬೆಲೆಯ ವಿಪರೀತ ಏರಿಕೆಯಿಂದ ಪರ್ಯಾಯ ದಾರಿಗೆ ಹುಡುಕಿದ ನಾಗ್ಪುರ ಮೂಲದ ಉದ್ಯಮಿಗೆ ಹೊಳೆದಿದ್ದು ಕುದುರೆ ಪ್ರಯಾಣ. ಕೆಲಸಕ್ಕೆ ಹೋಗಿ ಬರಲು ಕುದುರೆ ಸವಾರಿಯ ತರಬೇತಿಯನ್ನು ಈಗ ಪಡೆಯುತ್ತಿದ್ದಾರೆ. ತಮ್ಮ ಐಷಾರಾಮಿ ಕಾರನ್ನು ಹಲವು ಲಕ್ಷಗಳಿಗೆ ಮಾರಾಟ ಮಾಡಿದ ಅವರು ಕೇವಲ 40,000ಕ್ಕೆ ಕುದುರೆಯೊಂದನ್ನು ಖರೀದಿಸಿದರು. ಇಂಧನ ಬೆಲೆಏರಿಕೆ ವಿರುದ್ಧ ಜನಸಾಮಾನ್ಯನ ಪ್ರತಿಭಟನೆಯಂತೆ ಅದು ಕಾಣಬಹುದು.
ಆದರೆ ಸಂಜಯ್‌ಗೆ ಕುದುರೆಪ್ರಯಾಣ ಅದಕ್ಕಿಂತ ಉಪಯುಕ್ತವೆನಿಸಿದೆ.ಪೆಟ್ರೋಲ್ ಪಂಪ್‌ಗಳಲ್ಲಿ ಕಾಯುವ ಅಗತ್ಯವಿಲ್ಲ. ಟೈರ್‌ಗಳಿಗೆ ಗಾಳಿ ತುಂಬುವ ಅಗತ್ಯವಿಲ್ಲ ಮತ್ತು ಪರಿಸರ ಮಾಲಿನ್ಯವೂ ಆಗುವುದಿಲ್ಲವೆಂದು ಅವರು ಪ್ರತಿಕ್ರಿಯಿಸಿದ್ದಾರೆ. ಸಂಜಯ್ ಅವರಿಗೆ ಈಗ ತೃಪ್ತಿಯಾಗಿದ್ದು, ಹಣ ಉಳಿತಾಯವೊಂದೇ ಅಲ್ಲ, ಇಂಗಾಲದ ಸಂಗ್ರಹಕ್ಕೆ ತಮ್ಮ ಕಾಣಿಕೆಯಿಲ್ಲವೆಂದು ಸಮಾಧಾನವಾಗಿದೆ. |