ಭೂಗತ ಜಗತ್ತಿನ ಪಾತಕಿಗಳಿಂದ ತಮಗೆ ಬೆದರಿಕೆಯಿದೆಯೆಂದು ಬಿಜೆಪಿಯ ಯುವನಾಯಕ ವರುಣ್ ಗಾಂಧಿ ಭಾನುವಾರ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಛೋಟಾ ಶಕೀಲ್ ಗ್ಯಾಂಗಿನ 6 ಮಂದಿ ನಿಖರ ಗುರಿಕಾರರನ್ನು ದೆಹಲಿ ಪೊಲೀಸರು ಬಂಧಿಸಿದ ಮರುದಿನವೇ ವರುಣ್ ಹೇಳಿಕೆ ಹೊರಬಿದ್ದಿದೆ. ಛೋಟಾ ಶಕೀಲ್ ಗ್ಯಾಂಗಿನ ಪಾತಕಿಗಳ ತನಿಖೆ ನಡೆಸಿದಾಗ ಇಂದಿರಾಗಾಂಧಿ ವಂಶದ ಕುಡಿಯನ್ನು ತಾವು ಗುರಿಯಾಗಿಸಿದ್ದೆವೆಂದು ವರದಿಯಾಗಿತ್ತು. ಛೋಟಾ ಶಕೀಲ್ ಬಂಟರನ್ನು ತಮ್ಮ ಹತ್ಯೆಗೆ ನಿಯೋಜಿಸಿರುವ ಬಗ್ಗೆ ಫಿಲಿಬಿಟ್ ವಿವಾದಾತ್ಮಕ ಸಂಸದ ವರುಣ್, ತಮ್ಮ ವಿರುದ್ಧ ಇಂತಹ ಪಿತೂರಿ ನಡೆಸಿದ್ದು ಇದು ಎರಡನೇ ಬಾರಿಯಾಗಿದ್ದು, ತಾವು ಎಂತಹ ಭಯೋತ್ಪಾದನೆ ಎದುರಿಸುತ್ತಿದ್ದೇನೆಂಬುದನ್ನು ಇದು ರುಜುವಾತು ಮಾಡಿದೆಯೆಂದು ತಿಳಿಸಿದ್ದಾರೆ.ಆದರೆ ಇಂತಹ ಬೆದರಿಕೆಗಳಿಗೆ ಮಣಿಯಲು ನಿರಾಕರಿಸಿದ ಅವರು. ಇಂತಹ ಹೇಡಿತನದ ಕೃತ್ಯಗಳಿಗೆ ತಾವು ಜಗ್ಗುವುದಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಸ್ವಲ್ಪ ಮುಂಚೆ, ಶಕೀಲ್ ನಿಕಟವರ್ತಿ ರಷೀದ್ ಮಲಬಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಯುವ ನಾಯಕನ ಹತ್ಯೆ ಹೊಣೆಯನ್ನು ತನಗೆ ವಹಿಸಲಾಗಿತ್ತೆಂದು ಬಹಿರಂಗ ಮಾಡಿದ್ದ. ಏತನ್ಮಧ್ಯೆ, ವರುಣ್ ತಾಯಿ ಮನೇಕಾ ಗಾಂಧಿ ಪ್ರಧಾನಮಂತ್ರಿಗೆ ಪತ್ರ ಬರೆದು ತಮ್ಮ ಪುತ್ರನ ಹತ್ಯೆಗೆ ವ್ಯವಸ್ಥಿತ ಪಿತೂರಿ ನಡೆಯುವಂತೆ ಕಾಣುತ್ತಿದೆಯೆಂದು ತಿಳಿಸಿದರು. |