ಎಲೆಕ್ಟ್ರಾನಿಕ್ ಮತಯಂತ್ರಗಳ ಅಸಮರ್ಪಕ ನಿರ್ವಹಣೆ ಕುರಿತು ತನಿಖೆಗೆ ಆದೇಶಿಸಿರುವುದನ್ನು ಚುನಾವಣೆ ಆಯೋಗ ಅಲ್ಲಗಳೆದಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಕಳಪೆ ನಿರ್ವಹಣೆ ಕುರಿತು ಮಾಜಿ ಸರ್ಕಾರಿ ಅಧಿಕಾರಿ ಉಮೇಶ್ ಸೈಗಾಲ್ ರುಜುವಾತು ಮಾಡಿದ್ದಾರೆಂಬ ವರದಿಗಳನ್ನು ಕೂಡ ಚುನಾವಣೆ ಆಯುಕ್ತ ಎಸ್. ವೈ. ಖುರೇಷಿ ನಿರಾಕರಿಸಿದ್ದಾರೆ.'ಇಡೀ ಪ್ರಕರಣವನ್ನು ರೋಚಕಗೊಳಿಸಲು ಸೈಗಾಲ್ ಯತ್ನಿಸುತ್ತಿದ್ದಾರೆ.
ಅವರು ಮತಯಂತ್ರಗಳ ಅಸಮರ್ಪಕ ನಿರ್ವಹಣೆ ಕುರಿತು ಯಾವ ಪ್ರದರ್ಶನವನ್ನೂ ನಡೆಸಿಲ್ಲ. ಅವರೊಂದು ಪತ್ರ ಬರೆದಿದ್ದು, ನಾವು ಎಲ್ಲ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವಾದ್ದರಿಂದ ಅದನ್ನು ರುಜುವಾತು ಮಾಡುವಂತೆ ನಾವು ತಿಳಿಸಿದೆವು' ಎಂದು ಖುರೇಷಿ ತಿಳಿಸಿದರು.
ಇವಿಎಂಗಳ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ವ್ಯಕ್ತಪಡಿಸಿದ ಶಂಕೆಗಳನ್ನು ಮತ್ತು ಎಲ್ಲ ಪ್ರಸ್ತಾಪಗಳನ್ನು ಪರಿಶೀಲನೆ ನಡೆಸಿ ಅನುಮಾನಗಳ ಪರಿಹಾರಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಕೂಡ ಎಲೆಕ್ಟ್ರಾನಿಕ್ ಮತಯಂತ್ರಗಳು ದೋಷಪೂರಿತವಾಗಿದೆಯೆಂಬ ಶಂಕೆ ವ್ಯಕ್ತಪಡಿಸಿದ್ದು ಮುಂದಿನ ಚುನಾವಣೆಗಳಿಗೆ ಮತಪತ್ರಗಳನ್ನು ಬಳಸಬೇಕೆಂದು ಆಗ್ರಹಿಸಿದ್ದರು. |