ಬಿಜೆಪಿ ಧುರೀಣೆ ಮನೇಕಾ ಗಾಂಧಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಬಳಿ ವರುಣ್ ಗಾಂಧಿಗೆ ರಕ್ಷಣೆ ಕೋರಿ ಬರೆದ ಪತ್ರವನ್ನು ಕಾಂಗ್ರೆಸ್ ಇದೊಂದು ಹಾಸ್ಯಸ್ಪದ ವಿಚಾರವೆಂದು ಲೇವಡಿ ಮಾಡಿದೆ.
ಕಾಂಗ್ರೆಸ್ ವಕ್ತಾರ ಅಭಿಶೇಕ್ ಸಿಂಘ್ಪಿ ಖಾಸಗಿ ಚಾನಲ್ ಜತೆಗೆ ಮಾತನಾಡಿ, ಮನೇಕಾ ಗಾಂಧಿ ಮಗನಿಗೆ ಜೀವಬೆದರಿಕೆ ಇರುವುದಕ್ಕೆ ಇಷ್ಟೊಂದು ಖಾರವಾಗಿ ತತ್‌ಕ್ಷಣ ಪ್ರತಿಕ್ರಿಯಿಸಿದ್ದಾರೆ. ಆದರೆ ಅಂದು ತನ್ನ ಮಗ ವರುಣ್ ಚುನಾವಣಾಪೂರ್ವ, ಸಮಾಜಕ್ಕೇ ಮಾರಕವಾಗಿ ವಿಪ್ಲವ ಹೇಳಿಕೆಗಳನ್ನು ನೀಡಿ ಒಡೆಯಲು ಹೊರಟಿದ್ದಕ್ಕೆ ಮಾತ್ರ ಈ ಮೇನಕಾ ಗಾಂಧಿ ಏನೂ ಪ್ರತಿಕ್ರಿಯಿಸಿರಲಿಲ್ಲ. ಇದೊಂದು ಹಾಸ್ಯಾಸ್ಪದ ವಿಷಯ ಎಂದು ವ್ಯಂಗ್ಯವಾಡಿದರು.
ವರುಣ್ ಗಾಂಧಿ ಅವರ ವಕೀಲರಿಗೆ ಜೀವ ಬೆದರಿಕೆ ಒಡ್ಡಿರುವ ಛೋಟಾ ಶಕೀಲ್‍ನ ಗುಂಪಿಗೆ ಸೇರಿದ ಆರು ಮಂದಿಯನ್ನು ಬಂಧಿಸುವುದರಲ್ಲಿ ತನ್ನ ಮಗನ ರಕ್ಷಣೆ ಅಡಗಿದೆ ಎಂದು ಮನೇಕಾ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದರು.
ಮನೇಕಾ ಗಾಂಧಿ, ತನ್ನ ಮಗನ ಪ್ರಾಣಕ್ಕೆ ಕುತ್ತು ಬಂದಿರುವುದರಿಂದ ನನಗೆ ಆತನ ಮೇಲಿರುವ ಅತೀವ ಕಾಳಜಿಯಿಂದ ಆತನಿಗೆ ರಕ್ಷಣೆ ನೀಡಬೇಕೆಂದು ಕೋರುತ್ತಿದ್ದೇನೆ ಎಂದು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಯುಪಿಎ ಸರ್ಕಾರ ಎಂದಿಗೂ ಪ್ರತಿ ನಾಗರಿಕನಿಗೂ ಯಾವುದೇ ಬೇಧಬಭಾವವಿಲ್ಲದೇ ಎರಡು ಕೈಗಳ ರಕ್ಷಣೆಯನ್ನು ನೀಡುತ್ತಲೇ ಬಂದಿದೆ. ಅದನ್ನೇ ಇನ್ನೂ ಕೂಡಾ ಮುಂದುವರಿಸಲಿದೆ ಎಂದು ಅಣಕವಾಡಿದರು.
ರಕ್ಷಣೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ನೀಡುವುದು ಸರ್ಕಾರದ ಕರ್ತವ್ಯ. ಅದನ್ನ ನೀಡುತ್ತೇವೆ ಕೂಡಾ. ಆದರೆ ಮನೇಕಾ ಮಾತ್ರ ತನ್ನ ಮಗ ವರುಣ್ ಏನು ಮಾಡಿದ್ದಾನೆ ಎಂಬುದರ ಅರಿವೇ ಹೊಂದಿಲ್ಲ. ಅವರು ತಪ್ಪು ತಿಳುವಳಿಕೆಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು. |