ಉತ್ತರ ಪ್ರದೇಶದ ಪೊಲೀಸರಿಗೆ ಈಗೊಂದು ಹೊಸ ಜವಾಬ್ದಾರಿ ಹೆಗಲ ಮೇಲೇರಿದೆ. ಇತ್ತೀಚೆಗಷ್ಟೆ ರಾಜ್ಯದುದ್ದಕ್ಕೂ ಸ್ಥಾಪಿಸಿದ ಅಂಬೇಡ್ಕರ್, ಕಾನ್ಶಿರಾಮ್ ಹಾಗೂ ಮಾಯಾವತಿ ಪ್ರತಿಮೆಗಳನ್ನು ಹಗಲಿರುಳು ಕಣ್ಣಿಟ್ಟು ಕಾಯುವ ಕೆಲಸ ಉತ್ತರ ಪ್ರದೇಶ ಪೊಲೀಸರದ್ದು!ದಲಿತ ಶಕ್ತಿಯ ಪ್ರತೀಕಗಳಾದ 40ಕ್ಕೂ ಹೆಚ್ಚು ಮೂರ್ತಿಗಳನ್ನು ಮಾಯಾವತಿ ಸರ್ಕಾರ 1,200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಲಕ್ನೋದೆಲ್ಲೆಡೆ ಸ್ಥಾಪಿಸಿತ್ತು. ಇದರಲ್ಲಿ ಅಂಬೇಡ್ಕರ್, ಕಾನ್ಶಿರಾಮ್ ಅವರ ಪ್ರತಿಮೆಗಳಲ್ಲದೆ, ಸ್ವತಃ ಮಾಯಾವತಿ ಪ್ರತಿವೆಯೂ ಇತ್ತು. ಈಗ ಆ ಪ್ರತಿಮೆಗಳನ್ನು ಹಾಳುಗೆಡವದಂತೆ ರಕ್ಷಿಸುವುದೂ ಸರ್ಕಾರದ ಮೇಲೆ ಬಿದ್ದಿದೆ. ಹಾಗಾಗಿ 24 ಗಂಟೆಗಳ ಖಾಕಿ ರಕ್ಷಣೆಯೂ ಆ ಮೂರ್ತಿಗಳ ಪಾಲಿಗಿರಲಿದೆ.ತೆರಿಗೆದಾರರ ಹಣದಿಂದ ದಲಿತ ಮುಖಂಡರ ಪ್ರತಿಮೆಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಿದ್ದಕ್ಕೆ ಇತ್ತೀಚೆಗಷ್ಟೆ ಸುಪ್ರೀಕೋರ್ಟ್ ಮಾಯಾವತಿ ಸರ್ಕಾರಕ್ಕೆ ಮಂಗಳಾರತಿ ಮಾಡಿತ್ತು. ಜತೆಗೆ, ಕಾರಣ ಕೇಳಿ ನೋಟೀಸ್ ಜಾರಿ ಮಾಡಿತ್ತು. ಆದರೂ,ಈ ಬೆಳವಣಿಗೆಯ ನಂತರ ಈಗ ಸುಮಾರು 400 ಪೋಲೀಸರನ್ನು ಈ ಪ್ರತಿಮೆ ಕಾಯುವ ಕೆಲಸಕ್ಕೆ ನಿಯೋಜಿಸಿದ್ದಾರೆ. ಪ್ರತಿಮೆಗಳ ರಕ್ಷಣೆಯಲ್ಲಿ ಹಗಲಿರುಳು ಬೆವರು ಸುರಿಸಬೇಕಾಗಿದೆ. ಈ ಹೊಸ ಕೆಲಸವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿದಿನದ ಗಂಭೀರ ಕೆಲಸವನ್ನಾಗಿಯೇ ಪರಿಗಣಿಸಲಿದ್ದಾರೆ.ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಮಾತನಾಡಿ, ಪರಿಸರ ಇಲಾಖೆಯಿಂದಾಗಲೀ, ಅರಣ್ಯ ಇಲಾಖೆಯಿಂದಾಗಲೀ ಯಾವುದೇ ಪರವಾನಗಿಯನ್ನೂ ಪಡೆಯದೆ ತಮಗೆ ಬೇಕಾದಂತೆ ಯೋಜನೆ ರೂಪಿಸಿಕೊಂಡು ಶಂಕುಸ್ಥಾಪನೆ ಮಾಡುವುದು ಹಲವು ರಾಜ್ಯಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಇಂಥ ಆಟಗಳೆಲ್ಲ ಹಲವು ಕಾಲ ಮುಂದುವರಿಯುವುದಿಲ್ಲ ಎಂದು ಗರಂ ಆಗಿದ್ದಾರೆ.ಕಾನ್‌ಪುರದ ಡಿಐಜಿ ನೀರಾ ರಾವತ್ ಹೇಳುವಂತೆ, ಈ ಮೂರ್ತಿಗಳಿರುವ ಎಲ್ಲ ಸ್ಥಳಗಳನ್ನೂ ಪ್ರತಿನಿತ್ಯ ಏನೂ ಹಾನಿಯಾಗದಂತೆ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ. ಈ ದೈನಂದಿನ ಕಾರ್ಯವನ್ನು ತಪ್ಪಿಸುವಂತಿಲ್ಲ ಎಂದರು.ಈಗಾಗಲೇ ಸುಪ್ರೀಂಕೋರ್ಟ್ ನೀಡಿದ ನೋಟೀಸ್‌ಗೂ ಮಾಯಾವತಿ ಸರ್ಕಾರ ಸ್ಪಂದಿಸಬೇಕಿದೆ. ಈ ಹೊಸ ಪ್ರತಿಮೆಗಳನ್ನು ರಾಷ್ಟ್ರೀಯ ಸ್ಮಾರಕವಾದ ಗೌತಮ ಬುದ್ಧ ನಗರಕ್ಕೆ ಹತ್ತಿರದಲ್ಲೇ ಸ್ಫಾಪಿಸಿರುವುದಕ್ಕೆ ಕಾರಣವ್ನನೂ ಸುಪ್ರೀಂಕೋರ್ಟ್ ಕೇಳಿತ್ತು. ಜತೆಗೆ ಈ ಪ್ರತಿಮೆಗಳನ್ನು ಇಷ್ಟು ವೆಚ್ಚದಲ್ಲಿ ನಿರ್ಮಿಸುವ ಉದ್ದೇಶವನ್ನು ಈಗ ಮಾಯಾವತಿ ಸರ್ಕಾರ ಸುಪ್ರೀಂಕೋರ್ಟ್‌ಗೆ ವಿವರಿಸಬೇಕಾಗಿದೆ. |