1993ರ ಮುಂಬೈ ಸರಣಿ ಸ್ಫೋಟದ ತಪ್ಪಿತಸ್ಥರನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಬೇಕೆಂಬ ಕೋರಿಕೆಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದ್ದು, ಅವರು 50 ವರ್ಷಗಳ ಕಾಲಾವಧಿ ಅಥವಾ 65 ವರ್ಷ ವಯಸ್ಸಾಗುವ ತನಕ ಜೈಲುವಾಸ ಅನುಭವಿಸಬೇಕೆಂದು ಖಡಾಖಂಡಿತವಾಗಿ ಹೇಳಿದೆ.
ಕೈದಿಗಳಾದ ಸಲೀಂ ಮೀರಾ ಶೇಖ್, ನಿಯಾಜ್ ಶಾಯಿಕ್, ಶೇರ್ ಅಲಿ ಮತ್ತು ಮೊಯಿನ್ ಖುರೇಷಿ ಈಗಾಗಲೇ 14 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. 1993ರ ಮುಂಬೈ ಸ್ಫೋಟಗಳಿಗೆ ಸಂಬಂಧಿಸಿದಂತೆ ಟಾಡಾ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ನಾಲ್ವರು ಕೈದಿಗಳು ಮುಂಬೈ ಹೈಕೋರ್ಟ್‌ಗೆ ಕಳೆದ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿ, ತಮ್ಮನ್ನು ಅಕಾಲಿಕವಾಗಿ ಬಿಡುಗಡೆ ಮಾಡುವಂತೆ ಕೋರಿದ್ದರು. ಅವರ ಪ್ರಕರಣವನ್ನು ಇತ್ಯರ್ಥ ಮಾಡುವಂತೆ ರಾಜ್ಯಸರ್ಕಾರಕ್ಕೆ ಕೋರ್ಟ್ ಆದೇಶಿಸಿತ್ತು. ತಪ್ಪಿತಸ್ಥರಿಗೆ ಕ್ಷಮೆ ಸಿಗುವುದಿಲ್ಲವೆಂದು ಹೇಳಿದ ಸರ್ಕಾರ, ಜೈಲಿನಲ್ಲಿ 50 ವರ್ಷಗಳ ಕಾಲ ಅಥವಾ 65 ವರ್ಷ ವಯಸ್ಸಿನ ತನಕ ಕಳೆಯುವಂತೆ ತಿಳಿಸಿದೆ.
ಕೈದಿಗಳ ಉತ್ತಮ ನಡುವಳಿಕೆ ಆಧಾರದ ಮೇಲೆ ಜೈಲು ಶಿಕ್ಷೆಯ ಅವಧಿ ತಗ್ಗಿಸಲಾಗುತ್ತದೆ. ಕ್ಷಮೆ ನೀಡುವ ಪ್ರಕರಣಗಳಲ್ಲಿ ಜೀವಾವಧಿ ಕೈದಿಗಳ ಅಪರಾಧದ ತೀವ್ರತೆ ಆಧಾರದ ಮೇಲೆ ಜೀವಾವಧಿ ಕೈದಿಗಳನ್ನು ವರ್ಗೀಕರಿಸಿ, 14 ವರ್ಷ ಜೈಲುಶಿಕ್ಷೆ ಅನುಭವಿಸಿದವರಿಗೆ ಅಕಾಲಿಕ ಬಿಡುಗಡೆಗೆ ಪರಿಗಣಿಸುತ್ತದೆ |