ಪುರುಲಿಯ ಶಸ್ತ್ರಾಸ್ತ್ರ ಉದುರಿಸಿದ ಪ್ರಕರಣ ನಡೆದ ರಾತ್ರಿ ಜೀವದ ಹಂಗು ತೊರೆದು ಪೊಲೀಸರಿಗೆ ಸುದ್ದಿಮುಟ್ಟಿಸಿದ ಇಬ್ಬರು ಯುವಕರಿಗೆ ಕೊನೆಗೂ ಸಿಕ್ಕಿದ ಬಹುಮಾನ ರಾಜ್ಯಸರ್ಕಾರದಿಂದ 10,000 ರೂ. ಚೆಕ್ಕು. ಘಟನೆ ಜರುಗಿ 13 ವರ್ಷಗಳು ಕಳೆದ ಬಳಿಕ ತಮಗೆ ಸಿಕ್ಕಿದ ಯಕಶ್ಚಿತ್ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಇವರಿಬ್ಬರು ನಿರ್ಧರಿಸಿದ್ದಾರೆ.
1995ರ ಡಿ.17ರಂದು ಕಗ್ಗತ್ತಲಿನಲ್ಲಿ ಲ್ಯಾಟ್ವಿಯ ವಿಮಾನದಿಂದ ನೂರಾರು ಎಕೆ-47 ರೈಫಲ್ಲುಗಳನ್ನು ಮತ್ತು ಒಂದು ಮಿಲಿಯಕ್ಕಿಂತ ಹೆಚ್ಚು ಸುತ್ತು ಮದ್ದುಗುಂಡನ್ನು ಉದುರಿಸಲಾಗಿತ್ತು. ಶಸ್ತ್ರಾಸ್ತ್ರ ಎಸೆದ ಪ್ರಕರಣ ನಡೆದ ಕೆಲವು ತಿಂಗಳುಗಳ ತನಕ ಸುಭಾಶ್ ತಂತುಬಾಯಿ ಮತ್ತು ತಾರಿತ್ ಬಂದೋಪಾಧ್ಯಾಯ ಅವರ ಶೌರ್ಯವನ್ನು ಕೊಂಡಾಡಿ, ಸನ್ಮಾನಿಸಲಾಯಿತು. ಆಗ ಪ್ರತಿಪಕ್ಷದ ನಾಯಕರಾಗಿದ್ದ ವಾಜಪೇಯಿ ಯುವಕರ ಸೇವೆಯನ್ನು ಕೊಂಡಾಡಿ ಉದ್ಯೋಗದ ಭರವಸೆ ನೀಡಿದರು. ಗುಲಾಡಿ ಮತ್ತು ಖಾಟಂಗಾ ಗ್ರಾಮದ ನಿವಾಸಿಗಳಾದ ಇವರಿಬ್ಬರು ಯುವಕರು ವಿಮಾನ ಅತ್ಯಾಧುನಿಕ ಅಸ್ತ್ರಗಳನ್ನು ಉದುರಿಸಿದಾಗ ಸ್ಥಳೀಯ ಕ್ಲಬ್‌ನಲ್ಲಿದ್ದರು. ಮಧ್ಯರಾತ್ರಿ ಸಮಯದಲ್ಲಿ ವಿಮಾನದ ಶಬ್ದ ಕೇಳಿಬಂತು.
ಕೆಲವು ನಿಮಿಷಗಳ ಬಳಿಕ ಸಮೀಪದ ಜಮೀನಿನಲ್ಲಿ ಭಾರೀ ವಸ್ತುಗಳನ್ನು ಎಸೆದ ಸದ್ದು ಕೇಳಿಬಂತು, ನಾವು ಮೈಕೊರೆಯುವ ಚಳಿಯ ರಾತ್ರಿಯಲ್ಲಿ ತೆರಳಿದಾಗ ಅನೇಕ ಪೆಟ್ಟಿಗೆಗಳು ಬಿದ್ದಿದ್ದು ಕಾಣಿಸಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾಗಿ ಅವರು ಹೇಳಿದ್ದರು. ಮರುದಿನ ಬೆಳಿಗ್ಗೆ ಶಸ್ತ್ರಾಸ್ತ್ರ ಉದುರಿಸಿದ ಪ್ರಕರಣ ದೆಹಲಿಯ ಅಧಿಕಾರ ಪಡಸಾಲೆಯಲ್ಲಿ ಪ್ರತಿದ್ವನಿಸಿತು.
ಕೆಲವು ತಿಂಗಳ ಬಳಿಕ ವಾಜಪೇಯಿ ಅಲ್ಲಿಗೆ ಭೇಟಿ ನೀಡಿ ಉದ್ಯೋಗದ ಭರವಸೆ ನೀಡಿದ್ದರು. ನಿರುದ್ಯೋಗಿಗಳಾಗಿದ್ದ ಇಬ್ಬರೂ ಉತ್ತಮ ಭವಿಷ್ಯದ ಕನಸು ಕಂಡರು. ಆದರೆ ವಾಜಪೇಯಿ ಪ್ರಧಾನಿಯಾದರೂ ಯುವಕರ ಕನಸು ನನಸಾಗಲಿಲ್ಲ. ಈ ಘಟನೆ ನಡೆದು 13 ವರ್ಷಗಳು ಗತಿಸಿದ ಬಳಿಕ 10,000 ರೂ. ಕೊಡುಗೆಯನ್ನು ಸರ್ಕಾರಕ್ಕೆ ವಾಪಸ್ ಕಳಿಸಲು ಅವರು ನಿರ್ಧರಿಸಿದ್ದಾರೆ. |