ಲೋಕಸಭಾ ಚುನಾವಣೆಗಳಲ್ಲಿ ಹೀನಾಯ ಹಿನ್ನಡೆ ಅನುಭವಿಸಿದ ಬಳಿಕ ಪಕ್ಷದ ಆಂತರಿಕ ವಿದ್ಯಮಾನಗಳಿಂದಾಗಿ ರೋಸಿ ಹೋಗಿರುವ ಬಿಜೆಪಿ ಹಿರಿಯ ಮುಖಂಡ, ಲೋಕಸಭೆಯ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ, "ಪಕ್ಷದಲ್ಲಿ ವಕ್ತಾರರ ಸಂಖ್ಯೆಯೇ ಅಧಿಕವಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಕ್ಷಣದಲ್ಲಿ ಪಕ್ಷದ ಮುಖಂಡನೊಬ್ಬ ಎದ್ದು ನಿಂತು ಮಾತನಾಡುತ್ತಾನೆ ಮತ್ತು ಮುದ್ರಣ ಮಾಧ್ಯಮ ಅಥವಾ ಟೆಲಿವಿಶನ್ ಮಾಧ್ಯಮದಲ್ಲಿ ತನ್ನ ಹೆಸರು ಬರುವಂತೆ ನೋಡಿಕೊಳ್ಳುವ ಮನೋಭಾವ ಹೆಚ್ಚುತ್ತಿದೆ ಎಂದು ಭಾರತೀಯ ಜನಸಂಘ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆಡ್ವಾಣಿ ಹೇಳಿದರು.
ಪಕ್ಷದ ವಕ್ತಾರರಂತೆ ವರ್ತಿಸಲು ಹವಣಿಸುತ್ತಿರುವ ಇವರು ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿಯವರೆಲ್ಲ ಅನುಸರಿಸಿದ ಮೌಲ್ಯಗಳ ಬಗ್ಗೆ ಅಥವಾ ಅವರು ಪಕ್ಷಕ್ಕಾಗಿ, ಸಿದ್ಧಾಂತಕ್ಕಾಗಿ ಮಾಡಿದ ತ್ಯಾಗದ ಬಗ್ಗೆ ಕಾಳಜಿ ತೋರುವುದಿಲ್ಲ ಅಥವಾ ಅರ್ಥವಿಸಿಕೊಳ್ಳುವುದಿಲ್ಲ ಎಂದು ಆಡ್ವಾಣಿ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.
ಚುನಾವಣೆ ಸೋಲಿನ ಬಳಿಕ ಹಲವು ಮುಖಂಡರು ಬಹಿರಂಗವಾಗಿ ಧ್ವನಿಯೆತ್ತಿದ್ದರು, ಕೆಲವರು ಪತ್ರದ ಮೂಲಕ ಆಂತರಿಕ ಭಿನ್ನಮತ ಪ್ರಕಟಿಸಿದ್ದರು. ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದೊಳಗೆ ಹಿಂದುತ್ವ ಕಟುವಾದಿಗಳು ಮತ್ತು ಉದಾರವಾದಿಗಳ ನಡುವೆ ಸಂಘರ್ಷವಿರುವುದು ಎದ್ದುಕಂಡಿತ್ತು. |