ಗಾಜಿಯಬಾದ್ ಎಂಬಿಎ ಪದವೀಧರನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಂದಿದ್ದಾರೆಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ತಮ್ಮ ಸರ್ಕಾರ ಸಿದ್ಧವಿರುವುದಾಗಿ ಉತ್ತರಖಂಡ್ ಮುಖ್ಯಮಂತ್ರಿ ರಮೇಶ್ ಪೋಕರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ತಮಗೆ ಸಿಬಿ-ಸಿಐಡಿಯಲ್ಲಿ ಸಂಪೂರ್ಣ ನಂಬಿಕೆಯಿದೆ. ಆದರೆ ರಣಬೀರ್ ಸಿಂಗ್ ಕುಟುಂಬ ಸಿಬಿಐ ತನಿಖೆಗೆ ಇಚ್ಛಿಸಿದರೆ ತಾವು ಹಿಂಜರಿಯುವುದಿಲ್ಲ ಎಂದು ನಿಶಾಂಕ್ ಅವರು ಮೃತ ರಣಬೀರ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿದ ನಂತರ ಹೇಳಿದ್ದಾರೆ.
ರಣಬೀರ್ ಸಿಂಗ್ ಅವರು ಸ್ನೇಹಿತರ ಜತೆ ಬೈಕಿನಲ್ಲಿ ತೆರಳುತ್ತಿದ್ದಾಗ ಡೆಹ್ರಾಡೂನ್‌ನಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದರು.ರಣಬೀರ್ ತಂದೆ ರವೀಂದ್ರಪಾಲ್ ಸಿಂಗ್ ಮತ್ತಿತರ ಸಂಬಂಧಿಗಳು ರಾಜ್ಯ ಕಾರ್ಯಾಲಯದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಪುತ್ರನ ಸಾವನ್ನು ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೂಡ ಅವರು ಒತ್ತಾಯಿಸಿದ್ದರು.
ಸಿಂಗ್ ಮರಣೋತ್ತರ ಪರೀಕ್ಷೆಯಲ್ಲಿ ಸಮೀಪದಿಂದ ಅವರಿಗೆ ಗುಂಡುಹಾರಿಸಿದ್ದು ಮತ್ತು ಗಾಯದ ಗುರುತುಗಳಿಂದ ಚಿತ್ರಹಿಂಸೆಗೆ ಗುರಿಯಾಗಿರಬಹುದೆಂದು ಬಯಲುಮಾಡಿದೆ. ಏತನ್ಮಧ್ಯೆ ಗಾಜಿಯಾಬಾದ್ ಸಂಸದರೂ ಆಗಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ನಿಶಾಂಕ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಸಿಬಿಐ ತನಿಖೆಯ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. |