ಸತ್ಯಂ ಹಗರಣದಿಂದ ಲೇಪಿತವಾಗಿರುವ ಮೇತಾಸ್ ಕಂಪನಿಯು ನಿರ್ವಹಿಸುತ್ತಿದ್ದ 12 ಸಾವಿರ ಕೋಟಿ ರೂ. ಮೊತ್ತದ ಮೆಟ್ರೋ ರೈಲು ಯೋಜನೆಯನ್ನು ಆಂಧ್ರ ಪ್ರದೇಶ ಸರಕಾರ ಮಂಗಳವಾರ ಸ್ಥಗಿತಗೊಳಿಸಿದೆ.
ಆಂಧ್ರದ ಸ್ಥಳೀಯಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಅನಂ ರಾಮ ನಾರಾಯಣ ರೆಡ್ಡಿ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸುತ್ತಾ, ಈ ಯೋಜನೆಗೆ ಜಾಗತಿಕವಾಗಿ ಮರು ಟೆಂಡರ್ ಕರೆಯಬೇಕೇ ಎಂದು ನಿರ್ಧರಿಸಲು ಜುಲೈ 13ರಂದು ರಾಜ್ಯ ಸಂಪುಟ ಸಭೆ ನಡೆಯಲಿದೆ ಎಂದು ಮಂಗಳವಾರ ಹೇಳಿದರು.
ಗುತ್ತಿಗೆ ತೆಗೆದುಕೊಂಡಿದ್ದ ಮೇತಾಸ್ ಇನ್ಫ್ರಾಸ್ಟ್ರಕ್ಟರ್ ಕಂಪನಿ ನೇತೃತ್ವದ ಒಕ್ಕೂಟವು ಈ ಯೋಜನೆ ಪ್ರಾರಂಭಿಸಲು ಅಸಾಧ್ಯವಾಗಿರುವ ಸ್ಥಿತಿಯಲ್ಲಿದೆ. ಬೇರಾವುದೇ ಸಂಸ್ಥೆಗಳು ಇದಕ್ಕೆ ಮುಂದೆ ಬಂದಿಲ್ಲ. ಹೀಗಾಗಿ ಮೇತಾಸ್ ಜೊತೆಗಿನ ಒಪ್ಪಂದವನ್ನು ರದ್ದುಪಡಿಸುತ್ತಿದ್ದೇವೆ ಮತ್ತು ತಾತ್ಕಾಲಿಕವಾಗಿ ಯೋಜನೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಹಗರಣಪೀಡಿತ ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜುವಿನ ಕೌಟುಂಬಿಕ ಸಂಸ್ಥೆಯಾಗಿರುವ ಮೇತಾಸ್ ಕಂಪನಿಯನ್ನು ಆತನ ಮಗ ಬಿ.ತೇಜ ರಾಜು ನಡೆಸುತ್ತಿದ್ದರು. ಇದೇ ವರ್ಷದ ಜನವರಿ 7ರಂದು ಸತ್ಯಂ ಹಗರಣ ಬಯಲಾದಾಗ ಮೇತಾಸ್ ಮತ್ತು ಹೈದರಾಬಾದ್ ಮೆಟ್ರೋ ರೈಲು ಯೋಜನೆ ನಡುವೆ ತೊಂದರೆ ಕಾಣಿಸಿಕೊಂಡಿತ್ತು.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸರಕಾರದ ಯಾವುದೇ ನೆರವು ಯಾಚಿಸದೆಯೇ 12,132 ಕೋಟಿ ರೂ.ಗಳ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಮೇತಾಸ್, 33 ವರ್ಷಗಳ ಲೀಸ್ ಆಧಾರದಲ್ಲಿ ಸರಕಾರಕ್ಕೆ ಮೂರು ಕಂತುಗಳಲ್ಲಿ 30,311 ಕೋಟಿ ರೂ. ಮರಳಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಹತ್ತು ಲಕ್ಷ ಚದರ ಅಡಿ ಕಾಲ್ಪನಿಕ ಜಾಗದಲ್ಲಿ ಮೆಟ್ರೋ ರೈಲು ಡಿಪೋ ಮತ್ತು ನಿಲ್ದಾಣಗಳನ್ನು ನಿರ್ಮಿಸಿ, ಆದಾಯ ಸಂಗ್ರಹಿಸಲು ಮೇತಾಸ್ ಯೋಜನೆ ರೂಪಿಸಿತ್ತು. ಮೇತಾಸ್ ಶೇ.26, ಹೈದರಾಬಾದಿನ ನವಭಾರತ ವೆಂಚರ್ಸ್ ಲಿ. ಶೇ.16, ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವಿಸಸ್ ಲಿ. (ಐಎಲ್ಎಫ್ಎಸ್) ಮತ್ತು ಥಾಯ್ಲೆಂಡ್‌ನ ಇಟಾಲಿಯನ್-ಥಾಯ್ ಡೆವಲಪ್‌ಮೆಂಟ್ ಪಬ್ಲಿಕ್ ಕಂ. ಲಿ. ತಲಾ ಶೇ.5 ಪಾಲುದಾರಿಕೆಯಲ್ಲಿ ಈ ಯೋಜನೆ ರೂಪುಗೊಂಡಿತ್ತು. ಇದರಲ್ಲಿ ರಾಜ್ಯ ಸರಕಾರದ ಪಾಲು ಶೇ.11. |