ನೆರೆಯ ರಾಷ್ಟ್ರ ನಮಗೆ ಎಷ್ಟರ ಮಟ್ಟಿಗೆ ಹೊರೆ ಗೊತ್ತೇ? ಭಯೋತ್ಪಾದನೆ, ವಿಧ್ವಂಸಕ ಕೃತ್ಯಗಳು, ಉಗ್ರರ ಹಾವಳಿ ಇವೆಲ್ಲಾ ಹೊರತಾಗಿ, ಪಾಕಿಸ್ತಾನವು ವಿಭಜನೆಪೂರ್ವ ಅವಧಿಯಿಂದೀಚೆಗೆ ಭಾರತಕ್ಕೆ 300 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡಿದೆ! ಅಷ್ಟು ಮಾತ್ರವಲ್ಲ, ಪ್ರತಿ ವರ್ಷದ ಬಜೆಟ್ ಸಂದರ್ಭ ಇದನ್ನು 'ಬಾಕಿ ಉಳಿದ ಸಾಲ' ಎಂದೇ ಉಲ್ಲೇಖಿಸಿ, ಮುಂದಿನ ವರ್ಷಕ್ಕೆ ಮುದೂಡಲಾಗುತ್ತಿದೆ!
ಪಾಕಿಸ್ತಾನದಿಂದ ನಮಗೆ ಬರಬೇಕಾಗಿರುವ 300 ಕೋಟಿ ರೂ. ಮೊತ್ತವನ್ನು ಬಜೆಟ್ ಪುಸ್ತಕಗಳಲ್ಲಿ "ವಿಭಜನೆ-ಪೂರ್ವ ಸಾಲದ ಪಾಲಿನ ಬಾಬ್ತು ಪಾಕಿಸ್ತಾನದಿಂದ ಬರಬೇಕಾಗಿರುವ ಹಣ" ಎಂದು ಉಲ್ಲೇಖಿಸಲಾಗಿದೆ.
1950-51ರಲ್ಲಿ ಸ್ವತಂತ್ರ ಭಾರತದಲ್ಲಿ ಮಂಡಿಸಿದ ಮೊತ್ತ ಮೊದಲ ಬಜೆಟ್‌ನಲ್ಲಿ ಉಲ್ಲೇಖಿಸಲಾದ ಈ ಸಾಲ 'ನಿಧಿ'ಯು ದಶಕಗಳೇ ಕಳೆದರೂ ಹಾಗೇ ಇದೆ.
ಆದರೆ, ಕೇಂದ್ರ ಸರಕಾರಕ್ಕಿರುವ 34,95,452 ಕೋಟಿ ರೂ. ಸಾಲಕ್ಕೆ ಹೋಲಿಸಿದರೆ ಪಾಕಿನಿಂದ ಬರಬೇಕಾದ 300 ಕೋಟಿ ರೂ. ಲೆಕ್ಕವೇ ಅಲ್ಲ. ಅಂದರೆ ಇದು ಒಟ್ಟು ಸಾಲದ ಶೇ.0.008 ಭಾಗ ಮಾತ್ರ.
ಆದರೆ, 1950-51ರಲ್ಲಿ ಇದೇ ಹಣವು ಅಂದು ಭಾರತದ ಒಟ್ಟು ಸಾಲದ (2,865.40 ಕೋಟಿ ರೂ.) ಶೇ. 10 ಭಾಗವಾಗಿತ್ತು ಮತ್ತು ಭಾರತದ ವಿದೇಶೀ ಸಾಲದ (32 ಕೋಟಿ ರೂ.) ಹತ್ತು ಪಟ್ಟು ಆಗಿತ್ತು! ವಿಶೇಷವೇನೆಂದರೆ, ಭಾರತ ಸರಕಾರವು ಈ ಬಾಕಿ ಸಾಲಕ್ಕೆ ಯಾವುದೇ ಬಡ್ಡಿಯನ್ನೂ ವಿಧಿಸಿಲ್ಲ.
ಹಾಗೆ ನೋಡಿದರೆ, ಪಾಕಿಸ್ತಾನದ ಮಣ್ಣಿನಿಂದ ಭಾರತದ ಮೇಲಾಗುತ್ತಿರುವ ಭಯೋತ್ಪಾದನಾ ದಾಳಿಗಳು, ಕಾಶ್ಮೀರದಲ್ಲಿನ ಹಿಂಸಾಚಾರ, ಸೆರೆ ಸಿಕ್ಕ ಪಾಕಿಸ್ತಾನಿ ಉಗ್ರರಿಗೂ ಭದ್ರತೆಗಾಗಿ ಮಾಡುತ್ತಿರುವ ಭಾರೀ ವೆಚ್ಚ... ಇವೆಲ್ಲವನ್ನೂ ನೋಡಿದರೆ, ಈ 300 ಕೋಟಿ ಕೂಡ ಏನೇನೂ ಅಲ್ಲ ಎಂಬಂತಿದೆ. ಅಲ್ಲವೇ? |