ಜಮ್ಮುವಿನ ಕೆಲವು ದುರ್ಗಮ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಾದಕದ್ರವ್ಯ ಅಫೀಮಿನ ಗಿಡಗಳನ್ನು ಬೆಳೆದಿರುವುದನ್ನು ಉಪಗ್ರಹ ಚಿತ್ರಗಳು ಪತ್ತೆಹಚ್ಚಿವೆ. ಇದರಿಂದಾಗಿ ಭಯೋತ್ಪಾದಕರ ಮಾದಕದ್ರವ್ಯದ ನಂಟು ಬಯಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಫೀಮು ಭಾರೀ ಲಾಭದಾಯಕ ದರಕ್ಕೆ ಮಾರಾಟವಾಗುತ್ತದೆಂದು ಹೇಳಲಾಗಿದೆ.
ದುರ್ಗಮ ಪ್ರದೇಶಗಳಿಗೆ ತೆರಳಲು ಸಿಬ್ಬಂದಿಯ ಕೊರತೆಯಿದ್ದು, ಉಪಗ್ರಹ ಚಿತ್ರಗಳು ದಾದಾ, ಕಿಸ್ಟ್‌ವಾರ್ ಮತ್ತು ರಾಂಬಾನ್‌ನಲ್ಲಿ ಅಫೀಮಿನ ಬೆಳೆಗಳನ್ನು ಬೆಳದಿರುವುದು ಪತ್ತೆಹಚ್ಚಿದೆ. ಆಫ್ಘಾನಿಸ್ತಾನದಲ್ಲಿ ಅಫೀಮಿನ ಗಿಡಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಆದಾಯದ ಮೂಲವಾಗಿದೆ.
ಆಫ್ಘಾನಿಸ್ತಾನದ ಮಾದರಿಯಲ್ಲಿ ಭಾರತದಲ್ಲೂ ಅಫೀಮಿನ ಬೆಳೆ ತೆಗೆದು ಭಯೋತ್ಪಾದಕ ಜಾಲಗಳ ವಹಿವಾಟಿಗೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಸಂಶಯ ಇದರಿಂದಾಗಿ ಆವರಿಸಿದೆ. ಮಾದಕವಸ್ತು ನಿಯಂತ್ರಣ ದಳ ಈ ಕುರಿತು ಸಮೀಕ್ಷೆ ನಡೆಸಿದ್ದರಿಂದ ಅಫೀಮಿನ ಬೆಳೆ ಪತ್ತೆಹಚ್ಚಲು ಸಾಧ್ಯವಾಗಿದೆ. ಅಫೀಮಿನ ಬೆಳೆಯನ್ನು ಜಮ್ಮುವಿನ ದುರ್ಗಮ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದು ಅತ್ಯಂತ ಎತ್ತರದ ಪ್ರದೇಶ ಬೆಳೆಗೆ ಸೂಕ್ತವೆಂದು ಭಾವಿಸಲಾಗಿದೆ. |